ಮಂಗಳವಾರ, ಸೆಪ್ಟೆಂಬರ್ 21, 2021
26 °C
₹ 2,000 ಕೋಟಿ ಕಪ್ಪುಹಣ ಇರುವುದಾಗಿ ನಂಬಿಸಿ ಕೃತ್ಯ

ಜಯಲಲಿತಾ ಹೆಸರಲ್ಲಿ ₹ 5 ಲಕ್ಷ ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮುಖಂಡರಾಗಿದ್ದ ದಿವಂಗತ ಜಯಲಲಿತಾ ಅವರಿಗೆ ಸೇರಿದ್ದ ₹2,000 ಕೋಟಿ ಕಪ್ಪುಹಣ ತಮ್ಮ ಬಳಿ ಇರುವುದಾಗಿ ಹೇಳಿದ್ದ ವಂಚಕರು, ಹಣ ವರ್ಗಾವಣೆ ನೆಪದಲ್ಲಿ ನಗರದ ನಿವಾಸಿಯೊಬ್ಬರಿಂದ ₹ 5 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಹಬೀಬ್ ರೆಹಮಾನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಚೆನ್ನೈನ ಇಸ್ಮಾಯಿಲ್, ಅಸ್ಲಂ, ಸಲೀಂ ಹಾಗೂ ಆರೀಫ್ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಚೆನ್ನೈನಲ್ಲಿರುವ ಆರೋಪಿಗಳು, ದಿವಂಗತ ಜಯಲಲಿತಾ ಅವರ ಹೆಸರು ಬಳಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ’ ಎಂದರು. 

₹ 30 ಲಕ್ಷಕ್ಕೆ ₹1 ಕೋಟಿ ಆಮಿಷ: ‘ದೂರುದಾರ ಹಬೀಬ್, ಸರ್ಕಾರಿ ನೌಕರ. ಅವರ ಸ್ನೇಹಿತ ಫ್ಯಾನ್ಸಿ ಮಳಿಗೆ ಇಟ್ಟುಕೊಂಡಿದ್ದಾರೆ. ಅವರ ಜೊತೆಯಲ್ಲಿ ಹಬೀಬ್ ಕೆಲ ತಿಂಗಳ ಹಿಂದೆ ಚೆನ್ನೈಗೆ ಹೋಗಿದ್ದರು. ಅಲ್ಲಿಯ ಮಾರ್ಕೆಟ್‌ನಲ್ಲಿ ಆರೋಪಿಗಳ ಪರಿಚಯವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಹಬೀಬ್ ಜೊತೆ ಮಾತನಾಡಿದ ಆರೋಪಿಗಳಾದ ಇಸ್ಮಾಯಿಲ್ ಹಾಗೂ ಅಸ್ಲಂ, ‘ಜಯಲಲಿತಾ ನನಗೆ ಆತ್ಮಿಯರು. ಅವರಿಗೆ ಸೇರಿದ್ದ ₹2,000 ಕೋಟಿ ಕಪ್ಪುಹಣ ನನ್ನ ಬಳಿ ಇದೆ. ಎಲ್ಲವೂ ₹500 ಮುಖಬೆಲೆ ನೋಟುಗಳು. ಅವುಗಳನ್ನು ಖರ್ಚು ಮಾಡುವುದು ತುಂಬಾ ಕಷ್ಟ. ನೀವೇನಾದರೂ ₹2,000 ಮುಖಬೆಲೆಯ ₹30 ಲಕ್ಷ ಕೊಟ್ಟರೆ, ನಿಮಗೆ ₹ 500 ಮುಖಬೆಲೆಯ ₹1 ಕೋಟಿ ವಾಪಸು ಕೊಡುತ್ತೇವೆ’ ಎಂದಿದ್ದರು.’

‘₹30 ಲಕ್ಷ ಹಣವಿಲ್ಲವೆಂದು ಹಬೀಬ್ ಉತ್ತರಿಸಿದ್ದರು. ಆರೋಪಿಗಳು, ‘ನಿಮ್ಮ ಬಳಿ ಇರುವಷ್ಟು ಹಣ ಕೊಡಿ. ಉಳಿದ ಹಣವನ್ನು ಕಂತಿನಲ್ಲಿ ಪಾವತಿಸಿ. ಅದಕ್ಕೆ ಖಾತ್ರಿ ಆಗಿ ಬ್ಯಾಂಕ್‌ ಚೆಕ್‌ಗಳನ್ನು ನೀಡಿ’ ಎಂದೂ ಹೇಳಿದ್ದರು. ಊರಿಗೆ ಹೋಗಿ ತಿಳಿಸುವುದಾಗಿ ಹೇಳಿ ಹಬೀಬ್ ಬೆಂಗಳೂರಿಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ವಾರದ ಹಿಂದಷ್ಟೇ ಇಸ್ಮಾಯಿಲ್‌ಗೆ ಕರೆ ಮಾಡಿದ್ದ ಹಬೀಬ್, ‘ನನ್ನ ಬಳಿ ₹ 5 ಲಕ್ಷ ಮಾತ್ರ ಇದೆ’ ಎಂದಿದ್ದರು. ಅದನ್ನು ಪಡೆಯಲು ಒಪ್ಪಿಕೊಂಡಿದ್ದ ಇಸ್ಮಾಯಿಲ್, ‘ನಮ್ಮ ಕಡೆಯ ಸಲೀಂ ಹಾಗೂ ಆರೀಫ್ ಎಂಬುವರು ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಮಾಲ್ ಬಳಿ ಬರುತ್ತಾರೆ. ಅವರಿಗೆ ₹ 30 ಲಕ್ಷ ಕೊಡಿ. ಅವರು ನಿಮಗೆ ₹1 ಕೋಟಿ ವಾಪಸು ಕೊಡುತ್ತಾರೆ’ ಎಂದಿದ್ದ.’

‘ಅದಕ್ಕೆ ಒಪ್ಪಿದ್ದ ಹಬೀಬ್, ಇದೇ 5ರಂದು ಮಧ್ಯಾಹ್ನ ಗೋಪಾಲನ್ ಮಾಲ್ ಬಳಿ ಹೋಗಿ ಸಲೀಂ ಹಾಗೂ ಆರೀಫ್‌ ಅವರಿಗೆ ಹಣ ಕೊಟ್ಟಿದ್ದರು. ಕಾರಿನಲ್ಲಿರುವ ₹ 1 ಕೋಟಿ ತರುವುದಾಗಿ ಹೇಳಿ ಹೋದ ಆರೋಪಿಗಳು ವಾಪಸು ಬಾರದೇ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು