ಮಂಗಳವಾರ, ಜೂನ್ 28, 2022
24 °C
ರಸ್ತೆ ಅಗೆದು ಬಿಟ್ಟು ಹೋದ ಜಲಮಂಡಳಿ: ಮರು ನಿರ್ಮಾಣವಾಗದೆ ಜನರಿಗೆ ತೊಂದರೆ

ಧೂಳಿನಲ್ಲಿ ಮುಳುಗಿರುವ ಜಕ್ಕೂರು ನಿವಾಸಿಗಳು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದ್ದ ರಸ್ತೆ ಅಗೆದು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿ ಬಿಟ್ಟು ಹೋದ ಜಲಮಂಡಳಿ, ಜಲ್ಲಿ ಹೊದಿಸಿ ಸುಮ್ಮನಾದ ಬಿಬಿಎಂಪಿ, ಧೂಳಿನ ಅಬ್ಬರದಲ್ಲಿ ನಲುಗಿ ಹೊಗಿರುವ ನಿವಾಸಿಗಳು... ಇದು ಜಕ್ಕೂರು ಮುಖ್ಯ ರಸ್ತೆಯ ಸ್ಥಿತಿ.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಜಕ್ಕೂರಿನಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಜಲಮಂಡಳಿ ನಿರ್ವಹಿಸಿದೆ. ರಸ್ತೆ ಅಗೆದು ದೊಡ್ಡ ಪೈಪ್‌ಗಳನ್ನು ನೆಲದೊಳಗೆ ಹುದುಗಿಸಿ ಮಣ್ಣು ಮುಚ್ಚಲಾಗಿದೆ. ಅದರ ಮೇಲೆ ಬಿಬಿಎಂಪಿ ಜಲ್ಲಿ ಸುರಿದಿದೆ.

ಜಕ್ಕೂರು ವಿಮಾನ ತರಬೇತಿ ಕೇಂದ್ರದ ಕಾಂಪೌಂಡ್ ಪಕ್ಕದಲ್ಲೇ ಹಾದು ಹೋಗುವ ಜಕ್ಕೂರು ಮುಖ್ಯ ರಸ್ತೆಯ ಉದ್ದಕ್ಕೂ ಇದೇ ಸ್ಥಿತಿ ಇದೆ. ಅಂಬೇಡ್ಕರ್ ಭವನದ ಬಳಿಯ ಇಡೀ ವೃತ್ತದಲ್ಲಿ ವಾಹನ ಸಂಚಾರ ಮಾಡುವುದಿರಲಿ, ನಿಲ್ಲಲು ಸಾಧ್ಯವಾಗಷ್ಟು ಸಮಸ್ಯೆ ಉಂಟಾಗಿದೆ. ರಸ್ತೆಯಲ್ಲಿ ಒಂದು ವಾಹನ ಹಾದು ಹೋದರೆ ಇಡೀ ವೃತ್ತ ಧೂಳಿನಲ್ಲಿ ಮುಳುಗುತ್ತದೆ.

ಪ್ರಮುಖ ವೃತ್ತ ಆಗಿರುವುದರಿಂದ ಆಟೋರಿಕ್ಷಾ ನಿಲ್ಷಾಣ, ಸರಕು ಸಾಗಣೆಯ ಸಣ್ಣ ವಾಹನಗಳ ನಿಲ್ದಾಣವೂ ಇದೆ. ರಸ್ತೆ ಬದಿಯಲ್ಲಿ ಒಂದೆರಡು ನಿಮಿಷ ನಿಂತರೆ ಸಾಕು ಮೈತುಂಬ ಬಿಳಿ ಜಲ್ಲಿಪುಡಿ ಆವರಿಸಿಕೊಳ್ಳುತ್ತದೆ. ವ್ಯಾಪಾರಿಗಳು, ಆಟೋರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳ ಚಾಲಕರು ಪ್ರತಿನಿತ್ಯ ಇದೇ ಧೂಳಿನಲ್ಲಿ ಜೀವನ ನಡೆಸುವುದು ಅನಿವಾರ್ಯವಾಗಿದೆ.

‘110 ಹಳ್ಳಿ ಯೋಜನೆಯ ಕಾಮಗಾರಿ ನಡೆಯುತ್ತಿರುವ ಹಳ್ಳಿಗಳಿಗೆ ಕಾವೇರಿ ಪೈಪ್‌ಲೈನ್ ಮಾರ್ಗ ಕೊಂಡೊಯ್ಯಲು ರಸ್ತೆಯನ್ನು ಜಲ ಮಂಡಳಿಯಿಂದ ಅಗೆಯಲಾಗಿತ್ತು.  ಬಿಬಿಎಂಪಿಯಿಂದ ಜಲ್ಲಿ ಹೊದಿಕೆ ಹೊದಿಸಿ ಎರಡು ತಿಂಗಳಾಗಿದ್ದು, ಕಾಮಗಾರಿ ಮುಂದುವರಿಸಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

‘ಜಲ್ಲಿಪುಡಿಯ ಧೂಳು ಕುಡಿದು ಆಸ್ತಮಾ ಆವರಿಸಿಕೊಳ್ಳುವ ಭಯ ಶುರುವಾಗಿದೆ. ವಾಹನಗಳು ಹೋಗುವಾಗ ಚಕ್ರಕ್ಕೆ ಸಿಕ್ಕಿ ಹಾರುವ ಜಲ್ಲಿ ಕಲ್ಲುಗಳು ರಸ್ತೆ ಬದಿ ನಿಲ್ಲುವ ನಿಂತಿರುವ ಜನರಿಗೆ ಮತ್ತು ವಾಹನಗಳ ಗಾಜಿಗೆ ಹೊಡೆದು ಹಾನಿಯುಂಟಾಗುತ್ತಿದೆ. ಮೊದಲಿಗೆ ಒಂದಷ್ಟು ದಿನ ನೀರು ಹಾಕಿ ಧೂಳು ಕಡಿಮೆ ಮಾಡಲಾಗುತ್ತಿತ್ತು. ಈಗ ಅದನ್ನೂ ಮಾಡುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಲು ಪಾಲಿಕೆ ಸದಸ್ಯರಿಲ್ಲ, ಯಾರಿಗೆ ಸಮಸ್ಯೆ ಹೇಳಿಕೊಳ್ಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಕಾಮಗಾರಿ ನಿರ್ವಹಿಸಲು ರಸ್ತೆ ಅಗೆದಷ್ಟು ವೇಗದಲ್ಲಿ ಸರಿಪಡಿಸಿ ಡಾಂಬರು ಹಾಕಬೇಕು ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಇರಬೇಕು. ಜಲಮಂಡಳಿ ಅಥವಾ ಬಿಬಿಎಂಪಿ ಅಧಿಕಾರಿಗಳಿಗೆ ಜನರ ಸಮಸ್ಯೆ ಅರ್ಥವಾಗುವುದೇ ಇಲ್ಲ. ಒಬ್ಬರ ಮೇಲೊಬ್ಬರು ಬೊಟ್ಟು ಮಾಡಿಕೊಂಡು ಕಾಲ ತಳ್ಳುತ್ತಾರೆ. ಬಿಬಿಎಂಪಿ ಇರಬಹುದು, ಜಲಮಂಡಳಿ ಇರಬಹುದು, ಸಂಸ್ಥೆ ಯಾವುದು ಎಂಬುದು ನಮಗೆ ಮುಖ್ಯವಲ್ಲ. ಸಮಸ್ಯೆಗೆ ಪರಿಹಾರ ಸಿಗುವುದು ಮುಖ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರವೇ ಡಾಂಬರ್ ಹಾಕಲು ಸಿದ್ಧತೆ
‘ಜಕ್ಕೂರು ಮುಖ್ಯ ರಸ್ತೆಯಲ್ಲಿ ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಜಲ ಮಂಡಳಿ ಪೂರ್ಣಗೊಳಿಸಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಭಾನುವಾರದಿಂದಲೇ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರುಣ್ ತಿಳಿಸಿದರು.

‘ಕೆಂಪೇಗೌಡ ವೃತ್ತದಲ್ಲಿ ಕಲ್ವರ್ಟ್‌ ನಿರ್ಮಿಸುತ್ತಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಈಗ ತೊಡಕುಗಳೆಲ್ಲಾ ನಿವಾರಣೆಯಾಗಿದ್ದು, ಡಾಂಬರು ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು 20 ದಿನಗಳಲ್ಲಿ ಎಲ್ಲ ಕಾಮಗಾರಿಯೂ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

*

ರಸ್ತೆಗೆ ಜಲ್ಲಿ ಹಾಕಿ ಎರಡು ತಿಂಗಳಾಗಿದ್ದು, ಧೂಳಿನಲ್ಲೇ ಜೀವನ ನಡೆಸುತ್ತಿದ್ದೇವೆ. ಪ್ರತಿನಿತ್ಯ ಇಲ್ಲೇ ಕೂರಬೇಕಿರುವುದರಿಂದ ಆಸ್ತಮಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಆತಂಕ ಶುರುವಾಗಿದೆ
–ರಾಜೇಶ್, ಆಟೋರಿಕ್ಷಾ ಚಾಲಕ

*

ಆಟೋರಿಕ್ಷಾ ನಿಲ್ದಾಣ ಇದೇ ವೃತ್ತದಲ್ಲಿ ಇರುವುದರಿಂದ ರಿಕ್ಷಾಗಳನ್ನು ಇಲ್ಲೇ ನಿಲ್ಲಿಸಿಕೊಳ್ಳಬೇಕಿದೆ. ಇಡೀ ದಿನ ಧೂಳು ಕುಡಿಯುತ್ತಿದ್ದೇವೆ. ಕೂಡಲೇ ಸಮಸ್ಯೆ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
–ಬಾಬು, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ

*

ಕಾಮಗಾರಿ ಆರಂಭಿಸುವಾಗ ಇರುವ ವೇಗ, ಪೂರ್ಣಗೊಳಿಸುವ ತನಕ ಅಧಿಕಾರಿಗಳಿಗೆ ಇರುವುದಿಲ್ಲ. ಸಮಸ್ಯೆ ಹೇಳಿಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳೂ ಇಲ್ಲ. ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಕೂಡಲೇ ರಸ್ತೆಗೆ ಡಾಂಬರ್ ಹಾಕಬೇಕು.
–ಮಾನಪ್ಪ, ಚಾಲಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು