ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಸ್ಥಗಿತ: ಸಮಸ್ಯೆ ಅಪರಿಮಿತ

ಜಕ್ಕೂರು–ಯಲಹಂಕ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ: ಪಾಲಿಕೆಯ ಇಬ್ಬರು ಸದಸ್ಯರ ದಿವ್ಯ ಮೌನ
Last Updated 14 ನವೆಂಬರ್ 2019, 22:55 IST
ಅಕ್ಷರ ಗಾತ್ರ

ಬೆಂಗಳೂರು: ಮೇಲ್ಸೇತುವೆ ನಿರ್ಮಾಣವಾದರೆ ಸಂಚಾರ ಸರಾಗವಾಗುತ್ತದೆ. ಮಕ್ಕಳು ರೈಲಿಗೆ ಬಲಿಯಾಗುವುದು ತಪ್ಪುತ್ತದೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದಾಗಿತ್ತು. ಆದರೆ, ಅದೇ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸ್ಥಳೀಯರ ಬದುಕನ್ನು ನರಕವಾಗಿಸಿದೆ. ಮಳೆ ಬಂದರಂತೂ ‘ಕಠಿಣ ಶಿಕ್ಷೆಗೆ’ ಗುರಿಯಾದಷ್ಟು ನೋವು ಅನುಭವಿಸುತ್ತಾರೆ ಈ ಜನ.

ಈ ಕಾಮಗಾರಿಗೆ ನ್ಯಾಯಾಲಯದಲ್ಲಿ ತಡೆ ಇರುವುದು ಕೂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಅಸಹಾಯಕರನ್ನಾಗಿಸಿದೆ.

‌ಜಕ್ಕೂರಿನಿಂದ ಯಲಹಂಕ ಕಡೆಗೆ ಹೋಗುವ ಮಾರ್ಗದಲ್ಲಿ ರೈಲು ಹಳಿಯ ಮೇಲೆ ಈ ಸೇತುವೆ ನಿರ್ಮಾಣವಾಗುತ್ತಿದೆ. ರಸ್ತೆಯ ಒಂದು ಬದಿ ಬ್ಯಾಟರಾಯನಪುರ ವಾರ್ಡ್‌ ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ಬದಿ ಜಕ್ಕೂರು ವಾರ್ಡ್‌ಗೆ ಸೇರುತ್ತದೆ. ಕ್ರಮವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಈ ವಾರ್ಡ್‌ಗಳನ್ನು ಪ್ರತಿನಿಧಿಸುತ್ತಾರೆ.

‘ಮಳೆ ಬಂದರೆ ಇಲ್ಲಿ ಓಡಾಡಲು ಆಗುವುದಿಲ್ಲ. ಇಡೀ ರಸ್ತೆ ಕೆಸರುಗದ್ದೆಯಂತಾಗಿರುತ್ತದೆ. ಇನ್ನು, ಅರ್ಧ ಕಟ್ಟಿರುವ ಮೇಲ್ಸೇತುವೆ ಕೆಳಗೆ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಮದ್ಯಪಾನ ಮಾಡಿ ಬಾಟಲಿಎಸೆದು ಹೋಗುತ್ತಾರೆ. ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಮಂಗಳಮ್ಮ ಹೇಳಿದರು.

‘ಏನೇ ಕೇಳಿದರೂ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಕೈತೊಳೆದುಕೊಳ್ಳುತ್ತಾರೆ. ಯಲಹಂಕ ಹೋಗಲು ಹೆಚ್ಚುವರಿಯಾಗಿ ಐದಾರು ಕಿ.ಮೀ. ಸುತ್ತಿಕೊಂಡು ಹೋಗಬೇಕು. ಇಲ್ಲವೆ, ಜಿಕೆವಿಕೆ, ಅಳ್ಳಾಲಸಂದ್ರ ಗೇಟ್‌ ಮೂಲಕ ಹೋಗಬೇಕು. ದ್ವಿಚಕ್ರ ವಾಹನ ಸಾಗಲೂ ವ್ಯವಸ್ಥೆ ಮಾಡಿಲ್ಲ’ ಎಂದು ಸುರೇಶ್‌ ಅವರು ದೂರಿದರು.

ಹಾಳಾದ ‘ಅರ್ಧ’ ಕೆಳಸೇತುವೆ: ‘ಮೇಲ್ಸೇತುವೆಯ ಪಕ್ಕದಲ್ಲಿಯೇ ದ್ವಿಚಕ್ರ ವಾಹನ ಹೋಗಲು ಕೆಳಸೇತುವೆ ನಿರ್ಮಿಸಲಾಗಿದೆ. ಆದರೆ, ಇದರೊಳಗೆ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ, ಮತ್ತೊಂದು ಬದಿಯಲ್ಲಿ ಕಾಮಗಾರಿ ನಡೆದೇ ಇಲ್ಲ. ಇದರ ಸುತ್ತ ಗಿಡಗಳು, ಮುಳ್ಳುಕಂಟಿಗಳು ಬೆಳೆದಿವೆ’ ಎಂದು ಹೇಳಿದರು.

‘ಮೇಲ್ಸೇತುವೆ ನಿರ್ಮಾಣ ವಿಳಂಬವಾದರೂ, ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಿ ಎಂದು ಮನವಿ ಮಾಡಿದ್ದೇವೆ. ಒಂದೂವರೆ ತಿಂಗಳ ಹಿಂದೆ ಒಂದು ವಾರ ಪ್ರತಿಭಟನೆ ಮಾಡಿದೆವು. ಒಂದು ವಾರ ಕೆಲಸ ಮಾಡಿದರು. ಆಗಿನ ಮೇಯರ್ ಬಂದು ಪರಿಶೀಲಿಸಿ ಹೋದರು. ನಂತರ ಯಾರೂ ಇತ್ತ ತಲೆ ಹಾಕಿಲ್ಲ’ ಎಂದು ಅವರು ತಿಳಿಸಿದರು.

**
‘ದೂರದಾರರ ಮನವೊಲಿಸುತ್ತಿದ್ದೇವೆ’
‘ಜಕ್ಕೂರು ವಾರ್ಡ್‌ನ ಅತಿ ಮುಖ್ಯ ಸಮಸ್ಯೆಯೆಂದರೆ ಈ ಮೇಲ್ಸೇತುವೆ ಕಾಮಗಾರಿ. ಅಂದಾಜು ₹180 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಆದರೆ, ಇದಕ್ಕೆ ಭೂಮಿ ನೀಡಿದವರ ಪೈಕಿ, ಶ್ರೀಕಂಠಪ್ಪ ಮತ್ತು ದೇವರಾಜಪ್ಪ ಎಂಬುವರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ

ಮನವೊಲಿಸುತ್ತಿದ್ದೇವೆ. ವೈಯಕ್ತಿಕವಾಗಿ ₹5ಲಕ್ಷ ನೀಡುವುದಾಗಿಯೂ ಹೇಳಿದ್ದೇನೆ. ಆದರೂ ಅವರು ಪ್ರಕರಣ ವಾಪಸ್‌ ತೆಗೆದುಕೊಳ್ಳುತ್ತಿಲ್ಲ’ ಎಂದು ಜಕ್ಕೂರು ವಾರ್ಡ್ ಸದಸ್ಯ ಮುನೀಂದ್ರಕುಮಾರ್‌ ಹೇಳಿದರು.

‘ಖರಾಬು ಭೂಮಿಗೂ ಪರಿಹಾರ ನೀಡಬೇಕು ಎಂದು ಶ್ರೀಕಂಠಪ್ಪ ಬೇಡಿಕೆ ಇಟ್ಟಿದ್ದಾರೆ. ಆದರೆ, ಖರಾಬು ಭೂಮಿ ಎಂದರೆ ಅದು ಬಿಬಿಎಂಪಿಗೆ ಸೇರಿದ ಅಥವಾ ಸರ್ಕಾರದ ಜಾಗ ಎಂದೇ ಪರಿಗಣಿಸಲಾಗುತ್ತಿದೆ. ಇದನ್ನು ದೂರುದಾರರು ಒಪ್ಪುತ್ತಿಲ್ಲ. ನ್ಯಾಯಾಲಯ ಈ ಕಾಮಗಾರಿಗೆ ತಡೆ ನೀಡಿದೆ. ನಾವೇನೂ ಮಾಡುವಂತಿಲ್ಲ’ ಎಂದು ಹೇಳಿದರು.

‘ಗಲಾಟೆ ಮಾಡುವವರು ವಂಚಕರು’
‘ಮೇಲ್ಸೇತುವೆ ಕಾಮಗಾರಿ ವಿಚಾರ ಇಟ್ಟುಕೊಂಡು ಕೆಲವು ಚೀಟರ್‌ಗಳು (ವಂಚಕರು) ಪ್ರತಿಭಟನೆ ನಡೆಸಿದರು. ಮಾರುಕಟ್ಟೆಗಿಂತ ಹೆಚ್ಚಿನ ದರಕ್ಕೆ ಪರಿಹಾರ ನೀಡಲಾಗಿದೆ. ಆದರೂ ಕೆಲವರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ನಾವೇನು ಮಾಡುವುದಕ್ಕೆ ಆಗುತ್ತದೆ’ ಎಂದು ಬ್ಯಾಟರಾಯನಪುರ ವಾರ್ಡ್‌ ಸದಸ್ಯ ಪಿ.ವಿ. ಮಂಜುನಾಥ (ಬಾಬು) ಪ್ರಶ್ನಿಸಿದರು.

‘ಕೆಳಸೇತುವೆ ನಿರ್ಮಾಣಕ್ಕೆ ₹3.45 ಕೋಟಿ ಠೇವಣಿಯನ್ನು ಬಿಬಿಎಂಪಿಯಿಂದ ರೈಲ್ವೆ ಇಲಾಖೆಗೆ ನೀಡಲಾಗಿದೆ. ಅವರು ಕಾಮಗಾರಿ ಕೈಗೆತ್ತಿಕೊಂಡಿದ್ದರು. ಈಗ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದರು.

*
ರೈಲಿಗೆ ಸಿಲುಕಿ ಮೂವರು ಮಕ್ಕಳು, ಒಬ್ಬ ವೃದ್ಧ ಸಾವಿಗೀಡಾಗಿದ್ದಾರೆ. ನಮ್ಮ ಸಮಸ್ಯೆ ಕೇಳುವವರಿಲ್ಲ. ಈ ಬಾರಿ ಮತ ಕೇಳಲು ಬರುವವರಿಗೆ ಸರಿಯಾಗಿ ಪಾಠ ಕಲಿಸಲು ನಿರ್ಧರಿಸಿದ್ದೇವೆ.
–ರತ್ನಮ್ಮ, ಜಕ್ಕೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT