ಸೋಮವಾರ, ಜೂನ್ 14, 2021
22 °C
‘ಜನತಾ ನ್ಯಾಯಾಲಯ’ದಲ್ಲಿ, ಲೈಂಗಿಕ ಅಲ್ಪಸಂಖ್ಯಾತರ, ಲೈಂಗಿಕ ಕಾರ್ಯಕರ್ತೆಯರ, ಮಹಿಳೆಯರ ಅಳಲು

ಬೆಂಗಳೂರು | ಒಪ್ಪೊತ್ತಿನ ಊಟಕ್ಕೂ ತತ್ವಾರ, ನ್ಯಾಯ ಮರೀಚಿಕೆ: ಮಹಿಳೆಯರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಬೀದಿಗಳಲ್ಲಿ ನಿಂತಾಗ, ಮೈಮಾರಿಕೊಳ್ಳುವ ನಿನ್ನಿಂದಲೇ ಕೊರೊನಾ ಹರಡುತ್ತದೆ’ ಎಂದು ಪೊಲೀಸರ ನಿಂದನೆ. ‘ಕೊರೊನಾದಿಂದ ಒಂದು ಹೊತ್ತಿನ ಊಟಕ್ಕೂ ಅಲೆಯುವ ಪರಿಸ್ಥಿತಿ ಲೈಂಗಿಕ ಅಲ್ಪಸಂಖ್ಯಾತರದ್ದು’. ‘ಕೆಲಸದ ವೇಳೆ ವ್ಯಕ್ತಿಯಿಂದ ನನಗಾಗುತ್ತಿರುವ ಶೋಷಣೆಯಿಂದ ರಕ್ಷಿಸುವಂತೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ‘ಈಗ ಕೊರೊನಾ ಇದೆ' ಎಂಬ ಸಿದ್ಧ ಉತ್ತರ... ’

ಕೊರೊನಾ ಹಬ್ಬುತ್ತಿರುವ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಸಮಾಜದಲ್ಲಿ ಅನುಭವಿಸಿದ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟ ಪರಿ ಇದು.

‘ಗಮನ ಮಹಿಳಾ ಸಮೂಹ’ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ‘ಕೋವಿಡ್-19ರ ಸಂದರ್ಭದಲ್ಲಿ ಮಹಿಳೆಯರ ಮೇಲೆ ಶೋಷಣೆ’ ಕುರಿತು ವೆಬಿನಾರ್‌ ಮೂಲಕ ಶನಿವಾರ ಹಮ್ಮಿಕೊಂಡಿದ್ದ ‘ಜನತಾ ನ್ಯಾಯಾಲಯ’ದಲ್ಲಿ ಅವರು ತಮ್ಮ ಅಳಲು ತೋಡಿಕೊಂಡರು.

‘ಕೊರೊನಾ ಬಂದ ನಂತರ ಗ್ರಾಹಕರು ನಮ್ಮತ್ತ ಸುಳಿಯುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಮ್ಮನ್ನು ಸರ್ಕಾರವೂ ಕಡೆಗಣಿಸುತ್ತಲೇ ಬಂದಿದೆ' ಎಂದು ಲೈಂಗಿಕ ಕಾರ್ಯಕರ್ತೆಯೊಬ್ಬರು ವಿವರಿಸಿದರು.

‘ಸಹೋದ್ಯೋಗಿಯಿಂದ ನಿತ್ಯ ಶೋಷಣೆ ಅನುಭವಿಸುತ್ತಿದ್ದೇನೆ. ಇದಕ್ಕೆ ಪರಿಹಾರ ಕೋರಿ ಪೊಲೀಸ್ ಠಾಣೆಗಳಿಗೆ ಹೋದರೆ, ‘ಈಗ ಕೊರೊನಾ ಇದೆ’ ಎಂಬ ಉತ್ತರ ಸಿಕ್ಕಿತು. ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು?' ಎಂದು ಶೋಷಿತ ಮಹಿಳೆಯೊಬ್ಬರು ಪ್ರಶ್ನಿಸಿದರು.

'ಸಾಮಾನ್ಯ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ತೆರಳಿ ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದೆ. ಆದರೆ, ಕೊರೊನಾ ಬಂದ ನಂತರ ಅಂಗಡಿ ಮಳಿಗೆಗಳು ಮುಚ್ಚಿದವು. ಇದರಿಂದ ನಿತ್ಯದ ಆದಾಯಕ್ಕೂ ಪೆಟ್ಟು ಬಿತ್ತು. ಈ ಅವಧಿಯಲ್ಲಿ ಹಲವು ಉಪವಾಸದ ದಿನಗಳನ್ನು ಕಳೆದಿದ್ದೇವೆ. ನಮ್ಮಲ್ಲೂ ಕೊರೊನಾ ಸೋಂಕಿತರಿದ್ದಾರೆ. ಔಷಧ ಖರೀದಿಸಲೂ ಅವರ ಬಳಿ ಹಣವಿಲ್ಲ. ನಮಗಾಗಿ ಇರುವ ಯೋಜನೆಗಳನ್ನು ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ' ಎಂದು ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಅಳಲು ತೋಡಿಕೊಂಡರು.

ಐಪಿಎಸ್ ಅಧಿಕಾರಿ ಇಶಾ ಪಂತ್, 'ಪೊಲೀಸರಿಗೆ ಅಪರಾಧಕ್ಕಿಂತ ಕೊರೊನಾ ನಿಯಂತ್ರಣ ಹೆಚ್ಚು ಸವಾಲಾಗಿದೆ. ನಮ್ಮ ಸಮಾಜದ ವಾಸ್ತವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಾಗಬೇಕಿದೆ. ಮಹಿಳೆಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಇಲಾಖೆಯ ಅಧಿಕಾರಿಗಳೂ ಬೆಳೆಸಿಕೊಳ್ಳಬೇಕು' ಎಂದರು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ,' ಕೊರೊನಾ ಕಾಣಿಸಿಕೊಂಡ ಬಳಿಕ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ. ಲೈಂಗಿಕ ಕಾರ್ಯಕರ್ತರು, ಲೈಂಗಿಕ ಅಲ್ಪಸಂಖ್ಯಾತರು ಸೇರಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಸರ್ಕಾರ ಮುಂದಿನ ಆರು ತಿಂಗಳವರೆಗೆ ಮಾಸಿಕ ₹ 7,500 ನೆರವು ನೀಡಬೇಕು' ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು