ಶುಕ್ರವಾರ, ಮೇ 20, 2022
23 °C
ಹೆಡ್‌ ಕಾನ್‌ಸ್ಟೆಬಲ್, ಸೆಕ್ಯುರಿಟಿ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ

ಕಳ್ಳತನ ಆರೋಪಿ ಕಾಲಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳಿಗೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುವ ವೇಳೆ ಹೆಡ್‌ ಕಾನ್‌ಸ್ಟೆಬಲ್ ಹಾಗೂ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಆರೋಪಿ ಇಸ್ಮಾಯಿಲ್‌ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಜಯನಗರ ಪೊಲೀಸರು ಸೆರೆಹಿಡಿದಿದ್ದಾರೆ.

‘ಜಯನಗರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿಯಿಂದ ಬುಧವಾರ ನಸುಕಿನವರೆಗೆ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಸುಧಾಕರ್ ನೇತೃತ್ವದ ತಂಡ, ಮನೆ ಹಾಗೂ ಮಳಿಗೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಇಸ್ಮಾಯಿಲ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಆಟೊದಲ್ಲಿ ಹೊರಟಿದ್ದ ಆರೋಪಿಗಳು

‘ಮಳಿಗೆಗಳಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಗಳು, ಕದ್ದ ವಸ್ತುಗಳನ್ನು ಆಟೊದಲ್ಲಿ ಇಟ್ಟುಕೊಂಡು ತಡರಾತ್ರಿ ಹೊರಟಿದ್ದರು. ಅನುಮಾನಗೊಂಡಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ಆಟೊ ನಿಲ್ಲಿಸಲು ಯತ್ನಿಸಿದ್ದರು. ಆದರೆ, ಆಟೊ ನಿಲ್ಲಿಸದೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಅಧಿಕಾರಿ ತಿಳಿಸಿದರು.

’ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದ ಸಿಬ್ಬಂದಿ, ಆಟೊ ಬೆನ್ನಟ್ಟಿದ್ದರು. ರಾತ್ರಿ ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಸುಧಾಕರ್, ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಇಸ್ಮಾಯಿಲ್ ತಪ್ಪಿಸಿಕೊಂಡಿದ್ದ’ ಎಂದೂ ಹೇಳಿದರು.

ಮಚ್ಚು ಹಿಡಿದು ಓಡಾಟ

‘ಮಚ್ಚು ಹಿಡಿದುಕೊಂಡೇ ಕಳ್ಳತನಕ್ಕೆ ಬಂದಿದ್ದ ಇಸ್ಮಾಯಿಲ್, ಪೊಲೀಸರಿಂದ ತಪ್ಪಿಸಿಕೊಂಡು ಜಯನಗರದ ಮನೆಯೊಂದರ ಚಾವಣಿ ಹತ್ತಿದ್ದ. ಪೊಲೀಸರು ಬರುತ್ತಿದ್ದಂತೆ ಅಲ್ಲಿಂದಲೂ ಪರಾರಿಯಾಗಿದ್ದ. ಮಚ್ಚು ಹಿಡಿದುಕೊಂಡೇ ರಸ್ತೆಯಲ್ಲಿ ಓಡಿದ್ದ. ಹಿಡಿಯಲು ಹೋಗಿದ್ದ ಸೆಕ್ಯುರಿಟಿ ಸಿಬ್ಬಂದಿಯೊಬ್ಬರ ಮೇಲೂ ಹಲ್ಲೆ ಮಾಡಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಮಾರ್ಗಮಧ್ಯೆಯೇ ಹೆಡ್‌ ಕಾನ್‌ಸ್ಟೆಬಲ್‌ ಪ್ರದೀಪ್, ಆರೋಪಿ ಇಸ್ಮಾಯಿಲ್‌ನನ್ನು ಅಡ್ಡಗಟ್ಟಿದ್ದರು. ಅವರ ಮೇಲೂ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿದ್ದ. ಅವಾಗಲೇ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಧಾಕರ್, ಆರೋಪಿ ಎಡ ಕಾಲಿಗೆ ಗುಂಡು ಹೊಡೆದಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

‘ಸ್ಥಳದಲ್ಲೇ ಕುಸಿದು ಬಿದ್ದಿದ್ದ ಆರೋಪಿಯನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಡ್‌ ಕಾನ್‌ಸ್ಟೆಬಲ್ ಪ್ರದೀಪ್ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಕ್ಯುರಿಟಿ ಸಿಬ್ಬಂದಿಯೂ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು