ಭಾನುವಾರ, ನವೆಂಬರ್ 1, 2020
20 °C
ಡಾಂಬರು ಮಿಶ್ರಣದ ಉಷ್ಣಾಂಶ ಕಾಯ್ದುಕೊಳ್ಳದಿದ್ದರೆ ರಸ್ತೆಗೆ ಕುತ್ತು

ಜಯನಗರ: ಮಳೆಯ ನಡುವೆಯೇ ಡಾಂಬರೀಕರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೋರಾಗಿ ಮಳೆ ಸುರಿಯುತ್ತಿರುವುದರ ನಡುವೆಯೇ ಜಯನಗರ ವಾರ್ಡ್‌ನ (153) ಒಂದನೇ ಬ್ಲಾಕ್‌ನಲ್ಲಿ ಮಂಗಳವಾರ ರಸ್ತೆಗೆ ಡಾಂಬರೀಕರಣ ನಡೆಸಲಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಈ ವಾರ್ಡ್‌ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಮಂಗಳವಾರ ನಡೆಯುತ್ತಿತ್ತು. ಇದಕ್ಕಾಗಿ ಟಿಪ್ಪರ್‌ ಲಾರಿಯಲ್ಲಿ ಬಿಸಿ ಡಾಂಬರು ಮಿಶ್ರಣ ತರಿಸಲಾಗಿತ್ತು. ಅದನ್ನು ಹಿಂದಕ್ಕೆ ಒಯ್ದರೆ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಮಳೆಯ ನಡುವೆಯೇ ಡಾಂಬರು ವಿಶ್ರಣವನ್ನು ರಸ್ತೆಗೆ ಸುರಿದು ಅದನ್ನು ಸಮತಟ್ಟುಗೊಳಿಸಿದ್ದಾರೆ.

ಮಳೆಯ ನಡುವೆ ಡಾಂಬರೀಕರಣ ನಡೆಸಿದರೆ ಆ ರಸ್ತೆ ಬಾಳಿಕೆ ಬರುವುದಿಲ್ಲ. ಆ ಡಾಂಬರು ಶೀಘ್ರವೇ ಕಿತ್ತುಹೋಗಲಿದೆ ಎಂದು ತಜ್ಞರು ಅಭಿಪ‍್ರಾಯಪಡುತ್ತಾರೆ.

‘ಡಾಂಬರು ಮಿಶ್ರಣವು 160 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶ ಹೊಂದಿರಬೇಕು. ರಸ್ತೆಗೆ ಸುರಿಯುವ ವೇಳೆ ಅದರ ಉಷ್ಣಾಂಶ 120 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಇರಬಾರದು. ಮಳೆ ಬರುತ್ತಿರುವ ಸಂದರ್ಭದಲ್ಲಿ ಡಾಂಬರೀಕರಣ ನಡೆಸಿದರೆ ಡಾಂಬರು ಮಿಶ್ರಣದ ಉಷ್ಣಾಂಶ ಕಡಿಮೆಯಾಗುತ್ತದೆ’ ಎಂದು ಹಿರಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳೆ ರಸ್ತೆಗಳಿಗೆ ಡಾಂಬರು ಹಾಕುವುದಕ್ಕೂ ಮುನ್ನ ಬಿಸಿ ಬಿಸಿ ಅಂಟುಪದರವನ್ನು ಹಾಕಲಾಗುತ್ತದೆ. ಮಳೆ ಬಂದಾಗ ಇದನ್ನು ಹಾಕಿದರೆ ಅದು ತಣ್ಣಗಾಗುತ್ತದೆ. ಇನ್ನೊಂದೆಡೆ ಡಾಂಬರು ಮಿಶ್ರಣಕ್ಕೆ ಮಳೆ ನೀರು ಬಿದ್ದರೆ, ಅದೂ ತಕ್ಷಣ ಗಟ್ಟಿಯಾಗುತ್ತದೆ. ಅದು ರಸ್ತೆಗೆ ಸರಿಯಾಗಿ ಅಂಟಿಕೊಳ್ಳುವುದಿಲ್ಲ. ಮಳೆ ಬರುವಾಗ ಡಾಂಬರು ಹಾಕಿದರೂ ಅದು ಅಲ್ಪಾವಧಿಯಲ್ಲೇ ಪದರ ಪದರವಾಗಿ ಕಿತ್ತು ಬರುತ್ತದೆ’ ಎಂದು ಅವರು ವಿವರಿಸಿದರು.

ಮಳೆಯ ನಡುವೆ ಡಾಂಬರು ಹಾಕಿದ್ದಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆಕ್ಷೇಪ ವ್ಯಕ್ತಪಡಿಸಿದೆ.

‘ಮಳೆ ಬರುವಾಗ ಡಾಂಬರೀಕರಣ ನಡೆಸಬಾರದು ಎಂಬ ಕನಿಷ್ಠ ಜ್ಞಾನವಿಲ್ಲದ ಗುತ್ತಿಗೆದಾರರಿಗೆ ಗುತ್ತಿಗೆ ವಹಿಸಿದರೆ ಹೇಗೆ. ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕಾದ ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ. ನಗರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಸಡ್ಡೆ ಅವರಿಗಿದೆಯೇ’ ಎಂದು ಪಕ್ಷದ ಬೆಂಗಳೂರು ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಮಂಜುನಾಥ್‌ ಪ್ರಶ್ನಿಸಿದರು.

‘ಈ ರಸ್ತೆಗೆ ಗುತ್ತಿಗೆದಾರರು ಸ್ವಂತ ವೆಚ್ಚದಲ್ಲಿ ಮತ್ತೊಮ್ಮೆ ಡಾಂಬರೀಕರಣ ಮಾಡಿಸಬೇಕು’ ಎಂದು ಅವರು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅವರನ್ನು ಒತ್ತಾಯಿಸಿದರು.

ಪ್ರತಿಕ್ರಿಯೆ

ಮಳೆಯ ನಡುವೆಯೇ ಡಾಂಬರೀಕರಣ ನಡೆಸುವಂತಿಲ್ಲ. ಈ ಬಗ್ಗೆ ನನಗೂ ದೂರು ಬಂದಿದ್ದು, ಪರಿಶೀಲಿಸಿ ವರದಿ ನೀಡುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ
-ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ

 

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕಾಮಗಾರಿ ಬಗ್ಗೆ ಇಷ್ಟು ಅಸಡ್ಡೆ ಮಾಡಲಾಗುತ್ತಿದೆ. ಇನ್ನು ರಾಜ್ಯದ ಇತರ ಪ್ರದೇಶಗಳಲ್ಲಿ ಕಾಮಗಾರಿಗಳ ಗುಣಮಟ್ಟ ಹೇಗಿರಬಹುದು ಎಂದು ನಾವು ಊಹಿಸಬಹುದು.
– ಎಸ್‌.ಮಂಜುನಾಥ್, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಬೆಂಗಳೂರು ಮಹಾನಗರ ಜಿಲ್ಲಾ ಘಟಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು