ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಚರ್ಚೆಗೆ ಶಾಸಕರೇ ಗೈರು, ಜೆಡಿಎಸ್‌ ಸದಸ್ಯರ ಧೋರಣೆಗೆ ಆಕ್ಷೇಪ

Last Updated 8 ಡಿಸೆಂಬರ್ 2020, 21:00 IST
ಅಕ್ಷರ ಗಾತ್ರ

ಬೆಂಗಳೂರು: ಮಹತ್ವದ ವಿಷಯಗಳ ಚರ್ಚೆಗೆ ಸೂಚನೆ ನೀಡಿದವರೇ ವಿಧಾನಸಭಾ ಕಲಾಪಕ್ಕೆ ಗೈರು ಹಾಜರಾದರು. ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರ ಈ ಧೋರಣೆಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಜೆಡಿಎಸ್‌ ಸದಸ್ಯರು, ‘ಭಾರತ ಬಂದ್‌ಗೆ ಬೆಂಬಲ ನೀಡಲು ಪ್ರತಿಭಟನೆ ನಡೆಸಲು ಹೋಗುತ್ತಿದ್ದೇವೆ‘ ಎಂದು ಹೇಳಿ ಸದನದಿಂದ ನಿರ್ಗಮಿಸಿದರು. ಆ ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿಯಮ 69ರ ಅಡಿಯಲ್ಲಿ ಮಹತ್ವದ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಚಾರದ ಬಗ್ಗೆ ಜೆಡಿಎಸ್‌ನ ಆರ್‌.ಮಂಜುನಾಥ್‌, ಎಚ್.ಎಂ.ರೇವಣ್ಣ ಹಾಗೂ ಶಿವಲಿಂಗೇಗೌಡರು ಮಾತನಾಡಲಿದ್ದಾರೆ ಎಂದು ಸಭಾಧ್ಯಕ್ಷರು ಪ್ರಸ್ತಾಪಿಸಿದರು.

‘ಮಾತನಾಡುವವರು ಯಾರು ಇಲ್ಲವಲ್ಲ. ಆ ಕ್ಷೇತ್ರದ ಶಾಸಕರು ಈ ಹಿಂದೆಯೂ ಹಲವು ಬಾರಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿದ್ದರು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಅವಕಾಶ ನೀಡಿದಾಗ ಅವರೇ ಇಲ್ಲ‘ ಎಂದು ಸಭಾಧ್ಯಕ್ಷ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿವೇಶನ ಆರಂಭವಾಗಿ 2 ದಿನವಷ್ಟೇ ಆಗಿದೆ. ಈಗಲೇ ಈ ರೀತಿ ವರ್ತಿಸಿದರೆ ಹೇಗೆ. ಸದಸ್ಯರಿಗೆ ಗಾಂಭೀರ್ಯ ಇರಬೇಕಲ್ಲ’ ಎಂದು ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಸದಸ್ಯರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಅವರಿಗೆ ಎಚ್ಚರಿಕೆ ನೀಡಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಬಿಜೆಪಿ ಸದಸ್ಯರ ವಿರುದ್ಧ ಕಾಗೇರಿ ಗರಂ

ಕಲಾಪದ ವೇಳೆಯಲ್ಲಿ ಗುಂಪು ಗುಂಪಾಗಿ ಸೇರಿ ಚರ್ಚೆಗೆ ನಡೆಸುತ್ತಿದ್ದ ಬಿಜೆಪಿ ಸದಸ್ಯರ ವರ್ತನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಮಸೂದೆಗಳ ಮಂಡನೆ ವೇಳೆಯಲ್ಲಿ ಕುಮಾರ್ ಬಂಗಾರಪ್ಪ, ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಮಾತನಾಡುತ್ತಿದ್ದರು. ಸದಸ್ಯರ ಹೆಸರು ಕರೆದ ಕಾಗೇರಿ, ‘ಮಸೂದೆ ಮಂಡನೆಯ ವೇಳೆಯಲ್ಲೂ ನೀವು ನೀವೇ ಮಾತನಾಡಿದರೆ ಹೇಗೆ. ಇದು ಸರಿಯಾದ ವರ್ತನೆಯಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT