ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ವಿರುದ್ಧದ ಟೀಕೆ: ರಾಕ್‌ಲೈನ್‌ ವೆಂಕಟೇಶ್‌ ಮನೆಗೆ ಮುತ್ತಿಗೆ

Last Updated 10 ಜುಲೈ 2021, 22:33 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ್ದ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ 70 ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಬಿಡುಗಡೆ ಮಾಡಿದ್ದಾರೆ.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ವೆಂಕಟೇಶ್‌ ಅವರ ಮನೆಗೆ ಜೆಡಿಎಸ್‌ ಕಾರ್ಯಕರ್ತರು ಮುತ್ತಿಗೆ ಹಾಕಬಹುದು ಎಂಬ ಸುಳಿವು ಪೊಲೀಸರಿಗೆ ಇತ್ತು. ಅದನ್ನು ತಪ್ಪಿಸಲು ಮನೆಯ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಶನಿವಾರ ಬೆಳಿಗ್ಗೆಯೇ ರಾಕ್‌ಲೈನ್‌ ಮನೆ ಬಳಿ ಬಂದ ಜೆಡಿಎಸ್‌ ಕಾರ್ಯಕರ್ತರು, ಘೋಷಣೆ ಕೂಗುತ್ತಾ ಒಳಕ್ಕೆ ನುಗ್ಗಲು ಯತ್ನಿಸಿದರು.

ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಕೆಲಕಾಲ ನೂಕಾಟ, ತಳ್ಳಾಟ ನಡೆಯಿತು. ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮನೆಯ ಒಳಕ್ಕೆ ನುಗ್ಗಲು ಯತ್ನಿಸಿದ ಜೆಡಿಎಸ್‌ ಕಾರ್ಯಕರ್ತರು, ವೆಂಕಟೇಶ್‌ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಕಾರರನ್ನು ವಾಪಸು ಕಳಿಸಲು ಪೊಲೀಸರು ಯತ್ನಿಸಿದರು. ಆದರೆ, ಅವರು ಮನವೊಲಿಕೆಗೆ ಮಣಿಯಲಿಲ್ಲ. 70 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು, ವಾಹನವೊಂದರಲ್ಲಿ ಬೇರೆಡೆ ಕರೆದೊಯ್ದರು. ಕೆಲಕಾಲ ವಾಹನದಲ್ಲೇ ಇರಿಸಿಕೊಂಡು, ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ನಡುವೆ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಈ ವಿಚಾರದಲ್ಲಿ ಸುಮಲತಾ ಬೆಂಬಲಕ್ಕೆ ನಿಂತಿರುವ ರಾಕ್‌ಲೈನ್‌ ವೆಂಕಟೇಶ್‌, ಕುಮಾರಸ್ವಾಮಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದರು.

ಸುಮಲತಾಗೆ ರೈತ ಸಂಘ ಬೆಂಬಲ
ಪಾಂಡವಪುರ (ಮಂಡ್ಯ):
’ಕೆಆರ್‌ಎಸ್‌ ಉಳಿವಿಗಾಗಿ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಂಸದೆ ಸುಮಲತಾ ಅವರನ್ನು ಬೆಂಬಲಿಸಿ ಚಳವಳಿಯನ್ನು ತೀವ್ರಗೊಳಿಸಲಾಗುವುದು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ’ಎರಡು ದಶಕದ ಹಿಂದೆಯೇ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರು ಬೇಬಿಬೆಟ್ಟದ ಗಣಿಗಾರಿಕೆಯ ವಿರುದ್ಧ ಹೋರಾಟ ರೂಪಿಸಿದ್ದರು. ಅಣೆಕಟ್ಟೆಗೆ ಅಪಾಯವಿದೆ ಎಂದು ಎಚ್ಚರಿಸಿದ್ದರು. ಆದರೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಸಂಘ ನಿರಂತರವಾಗಿ ಹೋರಾಡುತ್ತಿದೆ ಎಂದರು.

’ಎಚ್‌.ಡಿ.ಕುಮಾರಸ್ವಾಮಿಯವರ ಮಾತುಗಳಿಂದ ಸುಮಲತಾ ಅವರು ಕುಗ್ಗಬಾರದು‌. ಸರ್ಕಾರವು ₹ 68ಕೋಟಿ ವೆಚ್ಚದಲ್ಲಿ ಅಣೆಕಟ್ಟೆಯ ಗೇಟ್‌ಗಳನ್ನು ದುರಸ್ತಿ ಮಾಡಿ, ಸಣ್ಣಪುಟ್ಟ ಬಿರುಕುಗಳನ್ನು ಮುಚ್ಚಿರುವುದನ್ನು ಲಘುವಾಗಿ ಪರಿಗಣಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT