ಮಂಗಳವಾರ, ಜನವರಿ 18, 2022
22 °C

ಜೈಲಿನಲ್ಲಿ ಸ್ನೇಹ; ಹೊರಬಂದು ಜಂಟಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿಚಕ್ರ ವಾಹನ ಕದಿಯುತ್ತಿದ್ದ ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಆರು ಮಂದಿಯನ್ನು ಜಗಜೀವನ್‌ರಾಮ್ ನಗರ ಪೊಲೀಸರು ಬಂಧಿಸಿದ್ದಾರೆ.

‘ಮೊಹಮ್ಮದ್ ಅರ್ಬಾಜ್, ಸೈಯದ್ ಅಯಾತ್, ಮೊಹಮ್ಮದ್ ಝೈನ್, ಮುಬಾರಕ್ ಪಾಷಾ, ವರುಣ್‌ಕುಮಾರ್ ಹಾಗೂ ಶಹಬಾಜ್ ಬಂಧಿತರು. ಅವರಿಂದ ₹ 10.50 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನ ಹಾಗೂ 28 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರು. ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಆರೋಪಿಗಳು ಇತ್ತೀಚೆಗೆ ಕಳ್ಳತನ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಮನೆಯಲ್ಲಿ ಕಳ್ಳತನ ಮಾಡುವ ಜೊತೆಯಲ್ಲೇ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಸಂಗತಿ ವಿಚಾರಣೆಯಿಂದ ತಿಳಿಯಿತು’ ಎಂದೂ ವಿವರಿಸಿದರು.

‘ಶಿವಾಜಿನಗರ, ಕಾಡುಗೋಡಿ, ಕಾಟನ್‌ಪೇಟೆ, ಕೆ.‍ಪಿ.ಅಗ್ರಹಾರ, ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಸುದ್ದಗುಂಟೆಪಾಳ್ಯ, ವಿಜಯನಗರ, ಬನಶಂಕರಿ, ಮಹಾಲಕ್ಷ್ಮಿ ಲೇಔಟ್, ಗಂಗಮ್ಮನಗುಡಿ ಹಾಗೂ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ಜೈಲಿನಲ್ಲೇ ಸ್ನೇಹ: ‘ಆರೋಪಿಗಳು ಎರಡು ವರ್ಷದಿಂದ ಪ್ರತ್ಯೇಕವಾಗಿ ಕಳ್ಳತನ ಕೃತ್ಯ ಎಸಗುತ್ತಿದ್ದರು. ವರ್ಷದ ಹಿಂದಷ್ಟೇ ಆರೋಪಿಗಳನ್ನು ಪ್ರತ್ಯೇಕವಾಗಿ ಬಂಧಿಸಿದ್ದ ವಿವಿಧ ಠಾಣೆಗಳ ಪೊಲೀಸರು, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಜೈಲಿನಲ್ಲಿ ಸ್ನೇಹಿತರಾಗಿದ್ದ ಆರೋಪಿಗಳು, ತಾವು ಎಸಗಿದ್ದ ಕೃತ್ಯಗಳನ್ನು ವಿವರಿಸುತ್ತಿದ್ದರು. ಜಾಮೀನು ಮೇಲೆ ಜೈಲಿನಿಂದ ಹೊರಹೋದ ನಂತರ ಗುಂಪು ಕಟ್ಟಿಕೊಂಡು ಕಳ್ಳತನ ಎಸಗಲೂ ಸಂಚು ರೂಪಿಸಿದ್ದರು.’

ಲಾಕ್ ಮುರಿದು ಕಳ್ಳತನ: ‘ಜೈಲಿನಿಂದ ಹೊರಬಂದಿದ್ದ ಆರೋಪಿಗಳು, ತಾವು ವಾಸವಿದ್ದ ಪ್ರದೇಶದ ನಿವಾಸಿಗಳ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಲಾಕ್ ಮುರಿದು ಕಳ್ಳತನ ಮಾಡಲಾರಂಭಿಸಿದ್ದರು. ಕದ್ದ ವಾಹನಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಸ್ನೇಹಿತರ ಮೂಲಕ ಮಾರಿಸುತ್ತಿದ್ದರು. ಬಂದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದರು. ಕೆಲ ಬೈಕ್‌ಗಳನ್ನು ವ್ಹೀಲಿಂಗ್ ಮಾಡಲು ಬಳಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.