ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಮಹಿಳೆ!

ಜ್ಞಾನಭಾರತಿ ಠಾಣೆ ಪೊಲೀಸರ ಮೇಲೆ ಹಲ್ಲೆ: ಮೂವರ ಬಂಧನ
Published 2 ಮೇ 2024, 15:47 IST
Last Updated 2 ಮೇ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರು ನೀಡಲು ಜ್ಞಾನಭಾರತಿ ಠಾಣೆಗೆ ಬಂದಿದ್ದ ಮಹಿಳೆಯರ ಗುಂಪು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ಸಂಬಂಧ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಗಳಾದ ಆಯೇಷಾ ತಾಜ್, ಫೌಜೀಯಾ ಖಾನಂ ಹಾಗೂ ಅರ್ಬಿನಾ ತಾಜ್ ಬಂಧಿತರು. ಮೇ 1ರಂದು ಸಂಜೆ ನಡೆದಿರುವ ಘಟನೆ ಸಂಬಂಧ ಪಿಎಸ್‌ಐ ಸುರೇಖಾ ನೀಡಿರುವ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆರೋಪಿ ಆಯೇಷಾ ತಾಜ್ ಹಾಗೂ ಇತರರು, ಠಾಣೆಗೆ ಬಂದಿದ್ದರು. ಠಾಣೆಯಲ್ಲಿ ಹೆಚ್ಚಿನ ಜನರಿದ್ದರು. ಅವರಿಂದ ದೂರು ಪಡೆಯುವುದರಲ್ಲಿ ಪೊಲೀಸರು ನಿರತರಾಗಿದ್ದರು. ಕೆಲ ನಿಮಿಷ ಕಾಯುವಂತೆ ಆಯೇಷಾ ಹಾಗೂ ಇತರರಿಗೆ ಹೇಳಿದ್ದರು’ ಎಂದು ತಿಳಿಸಿದರು.

ಅವಾಚ್ಯ ಶಬ್ದಗಳಿಂದ ನಿಂದನೆ, ಕಪಾಳಕ್ಕೆ ಏಟು: ‘ಠಾಣೆ ಮುಂಭಾಗದಲ್ಲಿ ಪುನಃ ಗುಂಪು ಸೇರಿದ್ದ ಆರೋಪಿಗಳು, ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾಗಿದ್ದರು. ಅದನ್ನು ಪ್ರಶ್ನಿಸಿದ್ದ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು, ಗಲಾಟೆ ಮಾಡದಂತೆ ವಿನಂತಿಸಿದ್ದರು. ಅವರ ಮೇಲೆಯೇ ಹರಿದಾಯ್ದಿದ್ದ ಆರೋಪಿ ಮಹಿಳೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದಿದ್ದರು. ಉಗುರುಗಳಿಂದ ಪರಚಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗಲಾಟೆ ಬಿಡಿಸಲು ಹೋದ ಇನ್‌ಸ್ಪೆಕ್ಟರ್ ಎಂ.ಎಸ್. ರವಿ, ಪಿಎಸ್‌ಐ ಸುರೇಖಾ, ಹೆಡ್‌ ಕಾನ್‌ಸ್ಟೆಬಲ್ ಚನ್ನಮ್ಮ, ಕಾನ್‌ಸ್ಟೆಬಲ್‌ಗಳಾದ ರೇಖಾ ಹಾಗೂ ಅಕ್ಕಮ್ಮ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದರು. ‘ನಾವು ಮಾನವ ಹಕ್ಕು ಸಂಘದವರು. ನಮ್ಮನ್ನು ಮುಟ್ಟಿದರೆ, ನಿಮ್ಮನ್ನು ಕೆಲಸದಿಂದ ತೆಗೆಸುತ್ತೇವೆ’ ಎಂಬುದಾಗಿಯೂ ಆರೋಪಿಗಳು ಬೆದರಿಸಿದ್ದರು’ ಎಂದು ತಿಳಿಸಿವೆ.

‘ಹಲ್ಲೆಯಿಂದ ಗಾಯಗೊಂಡಿರುವ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಲ್ಲರಿಂದಲೂ ಹೇಳಿಕೆ ಪಡೆದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT