ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲ್ಲದ ಮನಸ್ಸಿನಿಂದ ಸಂಪ್ರದಾಯಗಳ ಪಾಲನೆ: ಸಿದ್ಧಲಿಂಗಯ್ಯ

ಕವಿ ಸಿದ್ಧಲಿಂಗಯ್ಯ ಬೇಸರ
Last Updated 31 ಜನವರಿ 2021, 17:38 IST
ಅಕ್ಷರ ಗಾತ್ರ

ಬೆಂಗಳೂರು:‘ಜನರು ಒಲ್ಲದ ಮನಸ್ಸಿನಿಂದ ಜಾತಿ, ಸಂಪ್ರದಾಯ ಹಾಗೂ ಅಸ್ಪೃಶ್ಯತೆ ಅನುಸರಿಸುವುದನ್ನು ನೋಡಿದ್ದೇನೆ. ಜಾತಿ ಮತ್ತು ಸಂಪ್ರದಾಯಗಳ ಪಾಲನೆಯಲ್ಲಿ ಈಗಲೂ ದ್ವಂದ್ವ ನಿಲುವು ಇದೆ’ ಎಂದು ಕವಿ ಸಿದ್ಧಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಪಲ್ಲವ ಪ್ರಕಾಶನ ವತಿಯಿಂದ ನಯನ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ಅವರಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮಂಜಮ್ಮ ಅವರು ಜೋಗತಿ ಸಂಪ್ರದಾಯದತ್ತ ಹೋಗುವಾಗ, ಅವರ ಪೋಷಕರಲ್ಲಿ ಇದ್ದ ದ್ವಂದ್ವತೆ ಈ ಆತ್ಮಕಥನದಲ್ಲಿ ಅನಾವರಣಗೊಂಡಿದೆ. ‌ದೇವತೆಗಳೆಲ್ಲ ಸಂಸ್ಕೃತೀಕರಣಕ್ಕೆ ಒಳಗಾಗುತ್ತಿರುವುದು ಚಿತ್ರಣಗೊಂಡಿದೆ. ಜಾತಿಗಳ ನಡುವಿನ ಕೋಮು ಸಾಮರಸ್ಯವನ್ನೂ ಇಲ್ಲಿ ಕಾಣಬಹುದು’ ಎಂದು ವಿವರಿಸಿದರು.

‘ಜಾನಪದ ಕಲಾವಿದರಿಲ್ಲದೆ ವಿದ್ವಾಂಸರಿಲ್ಲ. ಜೋಗತಿ ಸಂಪ್ರದಾಯ ಕೇವಲ ತಳ ಸಮುದಾಯಕ್ಕೆ ಸೀಮಿತ ಎನ್ನುವುದು ತಪ್ಪು ಭಾವನೆ. ಮೇಲ್ವರ್ಗದವರು ಹಾಗೂ ಮುಸ್ಲಿಂ ಸಮುದಾಯದವರೂ ಜೋಗತಿಯರಾಗಿದ್ದಾರೆ. ಘೋರ್ಪಡೆ ಮಹಾರಾಜರ ವಂಶಸ್ಥರೂ ಜೋಗತಿಯರಾಗಿದ್ದರು’ ಎಂದು ಉಲ್ಲೇಖಿಸಿದರು.

‘ಮಂಜಮ್ಮ ಅವರಿಗೆ ಪದ್ಮಶ್ರೀ ದೊರೆತಿರುವುದು ಸಮಸ್ತ ಜೋಗತಿ ಸಮುದಾಯ ಹಾಗೂ ಶೋಷಿತ ಸಮುದಾಯಗಳಿಗೆ ಸಂದ ಗೌರವ. ಅವರಿಗೆ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುವ ಮೂಲಕ ನಾಡು ತನ್ನ ಗೌರವ ಹೆಚ್ಚಿಸಿಕೊಂಡಿದೆ’ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ,‘ನನ್ನ ಜೋಗತಿ ಸಮುದಾಯದ ನೋವುಗಳು ಹಾಗೂ ಬದುಕಿನ ದಾರಿಯನ್ನು ಕೃತಿಯಲ್ಲಿ ಬಿಚ್ಚಿಟ್ಟಿದ್ದೇನೆ. ನನ್ನ ಸೇವೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪೋಷಕರು ಹಾಗೂ ರಾಜ್ಯದ ಜನರಿಗೆ ಅರ್ಪಿಸುತ್ತೇನೆ. ಪ್ರಶಸ್ತಿಯಿಂದ ಅಹಂ ಇಲ್ಲ. ನೊಂದವರ ಜೊತೆ ಸದಾ ಇರುತ್ತೇನೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ,‘ಮಂಜಮ್ಮ ಅವರು ಜೋಗತಿ ಸಮುದಾಯದಲ್ಲಿ ಸೋತವರ ಧ್ವನಿಯಾಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT