ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ಆದೇಶ ರದ್ದು: ಜಾಯ್‌ ಐಸ್‌ಕ್ರೀಂ ಕಂಪನಿಗೇ ಜಮೀನು

Last Updated 9 ಆಗಸ್ಟ್ 2022, 5:37 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಪಟ್ಟಂದೂರು ಅಗ್ರಹಾರದಲ್ಲಿಜಾಯ್‌ ಐಸ್‌ ಕ್ರೀಂ ಕಂಪನಿಗೆ ನೀಡಲಾಗಿದ್ದ 3.2 ಎಕರೆ ಜಮೀನು ವಾಪಸು ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ), ಜಾಯ್ ಐಸ್ ಕ್ರೀಂ ಕಂಪನಿಗೆ ನಿಯಮಬಾಹಿರವಾಗಿ ಜಮೀನು ಮಂಜೂರು ಮಾಡಿತ್ತು ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಾಣವು ಕಾನೂನಿಗೆ ವಿರುದ್ಧವಾಗಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಕೆ.ಆರ್.ಪುರಂ ಹೋಬಳಿಯ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಕೆಐಎಡಿಬಿ ವತಿಯಿಂದ ಸರ್ವೇ ನಂ 42ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಜಾಯ್‌ ಐಸ್‌ ಕ್ರೀಂ ಕಂಪನಿಗೆ ನೀಡಲಾಗಿತ್ತು. ಈ ಪ್ರದೇಶವು ಇಳಿಜಾರು ಪ್ರದೇಶವಾಗಿದ್ದು ಇದನ್ನು ಉದ್ಯಾನವನನ್ನಾಗಿ ಅಭಿವೃದ್ಧಿಪಡಿಸುವುದಾಗಿ ಕೋರಿದ್ದ ಕಾರಣ ಹಲವು ಷರತ್ತುಗಳೊಂದಿಗೆ ಕೆಐಎಡಿಬಿ 16 ವರ್ಷಗಳ ಗುತ್ತಿಗೆ ಆಧಾರದ ಮೇರೆಗೆ ಈ ಜಮೀನನ್ನು ಕಂಪನಿಗೆ 1981ರಲ್ಲಿ ಮಂಜೂರು ಮಾಡಿತ್ತು.

ಒಪ್ಪಂದದ ಅನುಸಾರ 16 ವರ್ಷಗಳ ನಂತರ ಜಮೀನನ್ನು ಸರ್ಕಾರಕ್ಕೆ ಮರಳಿಸಿದ ಜಾಯ್ಐಸ್‌ಕ್ರೀಂ ಕಂಪನಿಯು 2006ರಲ್ಲಿ ಪುನಃ ಕಾರ್ಖಾನೆ ಆರಂಭಿಸುವುದಕ್ಕಾಗಿ ಜಮೀನು ನೀಡುವಂತೆ ಕೋರಿತು. ಈ ಮನವಿಯನ್ನು ಪುರಸ್ಕರಿಸಿದ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂಪನಿಗೆ ಜಮೀನು ಮಂಜೂರು ಮಾಡಿದರು. ಜಾಯ್‌ ಐಸ್‌ಕ್ರೀಂ ಕಂಪನಿಯು ಇದನ್ನು ಪಡೆದ 39 ದಿನಗಳಲ್ಲೇ ಪ್ರೆಸ್ಟೀಜ್‌ ಬಿಲ್ಡರ್ಸ್‌ಗೆ ಮಾರಾಟ ಮಾಡಿತ್ತು.

ಈ ಕುರಿತಂತೆ ಸಮಾಜ ಪರಿವರ್ತನಾ ಸಮುದಾಯ ಬೆಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಈ ದೂರಿನ ಅನ್ವಯ ಜಾಯ್‌ ಐಸ್‌ಕ್ರೀಂ ಕಂಪನಿಗೆ ನೀಡಲಾಗಿದ್ದ ಜಮೀನನ್ನು ಜಿಲ್ಲಾಧಿಕಾರಿ ವಾಪಸು ಪಡೆದಿದ್ದರು. ಕಂಪನಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT