ಭಾನುವಾರ, ಮೇ 9, 2021
22 °C
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ

ಜೆ.ಪಿ. ನಗರ: ಉದ್ಯಾನ ಅಧ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುರಿದಿರುವ ಆಟಿಕೆ ಸಾಮಾನುಗಳು, ಪಾಚಿ ಕಟ್ಟಿರುವ ಕಟ್ಟೆ, ನಡಿಗೆ ಪಥದ ಮೇಲೆ ಬಿದ್ದಿರುವ ಮರಗಳು, ನೆಪಮಾತ್ರಕ್ಕೆ ಇರುವ ಕಸದ ಡಬ್ಬಿ... 

ಜೆ.ಪಿ. ನಗರ ಮೊದಲ ಹಂತದ 13ನೇ ಮುಖ್ಯರಸ್ತೆ, 29ನೇ ಅಡ್ಡರಸ್ತೆಯಲ್ಲಿರುವ ಉದ್ಯಾನದ ಸ್ಥಿತಿ ಇದು. ಬಿಬಿಎಂಪಿಯ 178ನೇ ವಾರ್ಡ್‌ನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನ ಕಳಪೆ ನಿರ್ವಹಣೆಗೆ ಸಾಕ್ಷಿಯಂತಿದೆ ಎಂದು ದೂರುತ್ತಾರೆ ಸ್ಥಳೀಯರು. 

‘ಉದ್ಯಾನದೊಳಗಿನ ನಡಿಗೆ ಪಥ ವನ್ನು ಸ್ವಚ್ಛಗೊಳಿಸಿಲ್ಲ. ಮರ–ಗಿಡಗಳನ್ನು ಕಡಿದು ಅಲ್ಲಲ್ಲಿಯೇ ಬಿಸಾಡಿದ್ದಾರೆ. ಮಕ್ಕಳ ಆಟಿಕೆ ವಸ್ತುಗಳು, ಓಪನ್‌ ಜಿಮ್ ಪರಿಕರಗಳು ಸರಿಯಾಗಿಲ್ಲ. ಕಸ ನಿರ್ವ ಹಣೆಯೂ ಸಮರ್ಪಕವಾಗಿಲ್ಲ’ ಎಂದು ವಿಕಾಸ್ ಅಗರ್‌ವಾಲ್‌ ದೂರಿದ್ದಾರೆ. 

‘ವಾತಾವರಣ ತಂಪಾಗಿರುತ್ತದೆ. ಆದರೆ, ಆ ವಾತಾವರಣಕ್ಕೆ ತಕ್ಕಂತೆ ಉದ್ಯಾನವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. 

‘ಉದ್ಯಾನದ ಮೇಲೆಯೇ ಹೈಟೆನ್ಷನ್‌ ವೈಯರ್‌ ಹಾದು ಹೋಗಿದೆ. ಹೊಂಗೆ ಮರ ಸೇರಿದಂತೆ ಹಲವು ಮರಗಳು ಎತ್ತರ ಬೆಳೆದು, ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ, ಬೆಸ್ಕಾಂನವರು ಮರಗಳ ರೆಂಬೆ–ಕೊಂಬೆಗಳನ್ನು ಆಗಾಗ ಕತ್ತರಿಸುತ್ತಾರೆ. ಆದರೆ, ಅವುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರಿಂದ ಉದ್ಯಾನದಲ್ಲಿ ಕಸ ಬಿದ್ದಂತೆ ಕಾಣುತ್ತದೆ. ಆದರೆ, ನಾವು ನಿಯಮಿತವಾಗಿ ಸ್ವಚ್ಛತಾ ಕೆಲಸ ಸೇರಿದಂತೆ ಎಲ್ಲ ನಿರ್ವಹಣಾ ಕಾರ್ಯ ಮಾಡುತ್ತಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು. 

‘ನಾಲ್ಕು ವರ್ಷಗಳಿಗಿಂತ ಹಳೆಯ ಉದ್ಯಾನವಿದು. ಎಷ್ಟು ಅನುದಾನ ಬಿಡುಗಡೆ ಆಗಿತ್ತು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮರ–ಗಿಡಗಳು ಬಿದ್ದಿರುವ ಬಗ್ಗೆ, ಇನ್ನುಳಿದ ಸಮಸ್ಯೆಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಸೋಮವಾರ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸಂಬಂಧಪಟ್ಟ ವಿಭಾಗದವರಿಗೆ ಕ್ರಮ ಕೈಗೊಳ್ಳಲು ಹೇಳುತ್ತೇನೆ’ ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಸೂಪಂರಿಂಟೆಂಡೆಂಟ್ ಡಿ.ಎನ್. ನಿರಂಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ವಾರ್ಡ್‌ ಪ್ರತಿನಿಧಿಸುತ್ತಿದ್ದ ಪಾಲಿಕೆಯ ಮಾಜಿ ಸದಸ್ಯರನ್ನು ಸಂಪರ್ಕಿಸಿದಾಗ, ‘ಈ ಉದ್ಯಾನದ ನಿರ್ವಹಣೆಗೆ ಎಷ್ಟು ಅನುದಾನ ಬಿಡುಗಡೆಯಾಗಿತ್ತು ಎಂದು ನೆನಪಿಲ್ಲ. ನಿಮಗೆ ನಿಖರ ಮಾಹಿತಿ ಬೇಕೆಂದರೆ ಆರ್‌ಟಿಐ ಅಡಿ ಅರ್ಜಿ ಹಾಕಿ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು