ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 6 ಕಿ.ಮೀ ರಾಜಕಾಲುವೆಯ ಹೂಳು ತೆರವು

ಕೆ–100 ನೀರ ಹಾದಿ ಯೋಜನೆ
Last Updated 8 ಮೇ 2022, 12:57 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ರಾಜಕಾಲುವೆಯನ್ನು ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ನವೀಕರಿಸಲು ಕೈಗೆತ್ತಿಕೊಂಡಿರುವ ‘ಕೆ-100 ನೀರಹಾದಿ ಯೋಜನೆ’ಯಡಿ 6 ಕಿ.ಮೀ. ಉದ್ದದ ರಾಜಕಾಲುವೆಯ ಹೂಳೆತ್ತಿ, ಕಲುಷಿತಗೊಂಡಿದ್ದ ತಳಭಾಗವನ್ನು ಸ್ವಚ್ಛಗೊಳಿಸಲಾಗಿದೆ. ಇಲ್ಲಿ ನೀರು ಭೂಮಿಗೆ ಇಂಗುವುದಕ್ಕೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನುಳಿದ 3.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ರಾಜಕಾಲುವೆ ಇಕ್ಕೆಲಗಳಲ್ಲಿ ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುದ್ದೀಪಗಳ ಅಳವಡಿಕೆ, ಪಕ್ಕದಲ್ಲಿ ವಿಹಾರಪಥ ರೂಪಿಸಿ ಗ್ರಾನೈಟ್ ಅಳವಡಿಕೆ, ಗ್ರಿಲ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ.

ರಾಜಕಾಲುವೆ ಪಕ್ಕದಲ್ಲಿರುವ ಮನೆಗಳ ಶೌಚನೀರನ್ನು ನೇರವಾಗಿ ರಾಜಕಾಲುವೆಗೆ ಹರಿದು ಬಿಡುತ್ತಿದ್ದರು. ಅದನ್ನು ತಡೆಯಲು ಜಲಮಂಡಳಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಹೊಸದಾಗಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಶೌಚನೀರು ರಾಜಕಾಲುವೆ ಸೇರದಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲುಕುಂಬಾರಗುಂಡಿ ಬಳಿ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ (ಎಸ್‌ಟಿಪಿ) ನಿರ್ಮಿಸಲಾಗುತ್ತಿದೆ. ಈ ಎಸ್‌ಟಿಪಿಯು ನಿತ್ಯ 50 ಲಕ್ಷ ಲೀಟರ್‌ಗಳಷ್ಟು ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಲಿದೆ.

ಜೆ.ಸಿ ರಸ್ತೆಯಿಂದ ಶಾಂತಿನಗರ ಬಸ್ ನಿಲ್ದಾಣದವರೆಗಿನ 1.5 ಕಿ.ಮೀ ಉದ್ದದ ರಾಜಕಾಲುವೆಯ ಎರಡೂ ಬದಿಯ ತಡೆಗೋಡೆಗಳು ಹಾಗೂ ತಳಮಟ್ಟದ ಸೇತುವೆಗಳ ವಾಸ್ತುಶಿಲ್ಪವನ್ನು ವಿಶೇಷ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ರಾಜಕಾಲುವೆಗಳಲ್ಲಿ ನಿರ್ಮಿಸುತ್ತಿರುವ 6 ಸೇತುವೆಗಳು ಪೂರ್ಣಗೊಂಡಿವೆ. ಇನ್ನುಳಿದ 3 ಸೇತುವೆಗಳ ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲಾಗಿದೆ. ರಾಜಕಾಲುವೆಯ ಎರಡೂ ಬದಿಗಳಲ್ಲೂ ಸರ್ವೀಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ವಿಸ್‌ರಸ್ತೆಗಳಲ್ಲಿ ಬೀಳುವ ಮಳೆ ನೀರು ರಾಜಕಾಲುವೆಗೆ ಹರಿದು ಹೋಗುವಂತೆ ಮಾಡಲು ಕೊಳವೆಗಳನ್ನು ಅಳವಡಿಸಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಕೇಬಲ್ ಅಳವಡಿಕೆಗೆ ಕೊಳವೆ ಹಾಗೂ ಚೇಂಬರ್‌ಗಳನ್ನುನಿರ್ಮಿಸುವ ಕಾಮಗಾರಿಗಳೂ ಮುಗಿಯುವ ಹಂತದಲ್ಲಿವೆ.

ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆಯಡಿ ‘ಕೆ–100 ನೀರ ಹಾದಿ’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದರು. ಕೆರೆಗೆ ಮಳೆ ನೀರು ಮಾತ್ರ ಸೇರುವಂತೆ ಮಾಡುವ ಹಾಗೂ ರಾಜಕಾಲುವೆಯನ್ನೂ ಜನಸ್ನೇಹಿ ತಾಣವನ್ನಾಗಿ ರೂಪಿಸುವ ಈ ಮಾದರಿ ಯೋಜನೆಯ ಪ್ರಗತಿಯ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ವಿವರಿಸಿದರು.

ಕಾಮಗಾರಿಯನ್ನು ಗಡುವಿನೊಳಗೆ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT