ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರಾಗಿ ಕೆ. ಅನ್ವರ್ ಬಾಷಾ

Published 4 ಸೆಪ್ಟೆಂಬರ್ 2023, 16:12 IST
Last Updated 4 ಸೆಪ್ಟೆಂಬರ್ 2023, 16:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಕ್ಫ್‌ ಮಂಡಳಿ ನೂತನ ಅಧ್ಯಕ್ಷರಾಗಿ ಚಿತ್ರದುರ್ಗ ನಗರದ ಕಾಂಗ್ರೆಸ್‌ ಮುಖಂಡ ಕೆ. ಅನ್ವರ್‌ ಬಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಡಳಿಯ ಹಿಂದಿನ ಅಧ್ಯಕ್ಷ ಶಾಫಿ ಸಅದಿ ಜುಲೈನಲ್ಲಿ ರಾಜೀನಾಮೆ ನೀಡಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಮಂಡಳಿಯ ಚುನಾಯಿತ ಸದಸ್ಯರಾದ ಅನ್ವರ್‌ ಬಾಷಾ ಮಾತ್ರ ನಾಮಪತ್ರ ಸಲ್ಲಿಸಿದರು. ಒಬ್ಬರೇ ಕಣದಲ್ಲಿ ಇದ್ದ ಕಾರಣ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.

ಶಾಫಿ ಸಅದಿ ರಾಜೀನಾಮೆಯಿಂದ ತೆರವಾದ ಬಾಕಿ ಅವಧಿಗೆ ಈಗ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಅನ್ವರ್‌ ಬಾಷಾ ಒಂದೂವರೆ ವರ್ಷಗಳ ಕಾಲ ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರಾಗಿರುತ್ತಾರೆ.

ಅನ್ವರ್‌ ಬಾಷಾ ಚಿತ್ರದುರ್ಗ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ಪ್ರಸ್ತುತ ಮಂಡಳಿಯ ಸದಸ್ಯರಾಗಿದ್ದು, ಮಂಡಳಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕಾನೂನು ಪದವೀಧರರಾಗಿರುವ ಇವರು, ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.

ಚುನಾವಣೆಯ ಬಳಿಕ ವಕ್ಫ್‌ ಮಂಡಳಿ ಕಚೇರಿಯಲ್ಲಿ ಅನ್ವರ್ ಬಾಷಾ ಅವರನ್ನು ಸಚಿವರಾದ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್‌, ರಹೀಂ ಖಾನ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್, ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌, ಶಾಸಕರಾದ ತನ್ವೀರ್‌ ಸೇಠ್, ಎನ್‌.ಎ. ಹ್ಯಾರೀಸ್‌, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಜಬ್ಬಾರ್‌ ಖಾನ್‌ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT