ಸೋಮವಾರ, ಜುಲೈ 4, 2022
21 °C

‘ಆರೋಗ್ಯ ಕವಚ’ ಇನ್ನಷ್ಟು ಸುಧಾರಣೆ: ಕೆ.ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಕವಚ (108) ಸೇವೆಯನ್ನು ಅಂತರರಾಷ್ಟ್ರೀಯ ಮಟ್ಟದ ತುರ್ತು ಸೇವೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಹೊಸ ಸೇವಾದಾರರನ್ನು ಹೊಂದಲು ಸದ್ಯವೇ ಟೆಂಡರ್‌ ಕರೆಯಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್‌ ತಿಳಿಸಿದರು.

ಈಗಿರುವ ಸೇವೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ಅವರು ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ ಶ್ರೇಷ್ಠ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಆರೋಗ್ಯ ಕವಚ ಕರೆ ಕೇಂದ್ರವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ಈಗಿರುವ 54 ಆಸನಗಳ ಕರೆ ಕೇಂದ್ರವನ್ನು 75 ಆಸನಗಳ ಕರೆ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಸದರಿ ಆಸನ ವ್ಯವಸ್ಥೆಯನ್ನು 120 ಆಸನಗಳವರೆಗೆ ವಿಸ್ತರಿಸಲು ಹಾಗೂ ಸುಧಾರಣೆಗಾಗಿ ಅವಶ್ಯವಿರುವ ಇತರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಆಂಬುಲೆನ್ಸ್‌ ಸೇವೆ ತುರ್ತು ಸೇವೆಯಾಗಿದೆ. ಆದರೆ ತುರ್ತು ಸೇವೆ ಒದಗಿಸುವಲ್ಲಿ ತಡವಾಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. 2007–08 ರ ಸಾಲಿನಲ್ಲಿ ಜಿವಿಕೆ ಸಂಸ್ಥೆಗೆ 10 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ಗುಣ ಮಟ್ಟದ ಸೇವೆ ಸಿಗದ ಕಾರಣ 2017 ರಲ್ಲಿ ಒಪ್ಪಂದವನ್ನು ರದ್ದುಪಡಿಸಲಾಯಿತು. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಿಂದೆ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿನ ಒಪ್ಪಂದವೇ ಸಮಸ್ಯೆಯಾಗಿದೆ ಎಂದು
ಹೇಳಿದರು.

ಜೈನ್‌ ಸರ್ಕಿಟ್‌ಗೆ ಮೂಡಬಿದ್ರೆ: ಕೇಂದ್ರಕ್ಕೆ ಪಸ್ತಾವನೆ
ಮೂಡಬಿದ್ರೆ ಮತ್ತು ಕಾರ್ಕಳವನ್ನು ‘ಜೈನ್‌ ಸರ್ಕಿಟ್‌’ ಪ್ರವಾಸೋದ್ಯಮ ಯೋಜನೆಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್‌ ಹೇಳಿದರು.

ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರ ಪರವಾಗಿ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ, ಕೇಂದ್ರದಿಂದಲೇ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲ ತೀರದಲ್ಲಿ ಸರ್ಫಿಂಗ್‌ ಸ್ಕೂಲ್‌, ಶೌಚಾಲಯ, ಪಾರ್ಕಿಂಗ್‌, ಸ್ವಾಗತ ಕಮಾನು, ಪರಗೋಲಾದೊಂದಿಗೆ ವಾಕಿಂಗ್‌ ಟ್ರ್ಯಾಕ್‌, ಕಿಯಾಸ್ಕ್‌ಗಳು, ರಸ್ತೆ, ಚರಂಡಿ ಮತ್ತು ಕಾಲುಪಥ ಅಭಿವೃದ್ಧಿ ಮುಂತಾದ ಪ್ರವಾಸಿ ಸೌಲಭ್ಯಗಳನ್ನು ₹100 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು