ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆಕಾಯಿ ಪರಿಷೆ: ಸಂಭ್ರಮದ ಜನಜಾತ್ರೆ

ಬಸವನಗುಡಿಯ ಮುಖ್ಯರಸ್ತೆ ಸುತ್ತಮುತ್ತ ಆಟಿಕೆ, ತಿನಿಸು, ಮಾರಾಟ ಮಳಿಗೆಗಳ ಅಬ್ಬರ
Published 11 ಡಿಸೆಂಬರ್ 2023, 16:28 IST
Last Updated 11 ಡಿಸೆಂಬರ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ಸುಂಕೇನಹಳ್ಳಿ ತನ್ನ ಪಾರಂಪರಿಕ ‘ಕಡಲೆಕಾಯಿ ಪರಿಷೆಯ’ ಆಚರಣೆಗಾಗಿ ಕಡೆಯ ಕಾರ್ತೀಕ ಸೋಮವಾರದಂದು ಸಿಂಗಾರಗೊಂಡಿತ್ತು. ದೊಡ್ಡ ಬಸವನಿಗೆ ವಿಶೇಷ ಅಲಂಕಾರದ ಜೊತೆಗೆ, ಕಡಲೆಕಾಯಿ ಅಭಿಷೇಕ, ತುಲಾಭಾರವೂ ನಡೆಯಿತು. 

ಬಸವನಗುಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ‘ಕಡಲೆಕಾಯಿ ಪರಿಷೆಯ’ ಸಂಭ್ರಮ ತುಂಬಿತ್ತು. ಶನಿವಾರದಿಂದಲೇ ಜಾತ್ರೆ ಸಡಗರ ಆರಂಭವಾಗಿತ್ತಾದರೂ, ಸೋಮವಾರ ಪರಿಷೆಗೆ ಅಧಿಕೃತ ಚಾಲನೆ ನೀಡಲಾಯಿತು. ಲೋಹದ ಬಸವನ ಮೂರ್ತಿಗೆ  ಕಡಲೆಕಾಯಿಂದ ತುಲಾಭಾರ ಮಾಡುವ ಮೂಲಕ ಪರಿಷೆ ವಿದ್ಯುಕ್ತವಾಗಿ ಆರಂಭವಾಯಿತು. ಬೆಳಿಗ್ಗೆ ಆರಂಭವಾದ ಜನಜಾತ್ರೆ ಸಂಜೆಯಾಗುತ್ತಿದ್ದಂತೆ ಮತ್ತಷ್ಟು ರಂಗೇರಿತು.

ದೊಡ್ಡ ಬಸವಣ್ಣನೊಂದಿಗೆ ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು ಜಾತ್ರೆಯ ಸೊಬಗನ್ನು ಅನುಭವಿಸಿದರು. ಕಾಲಿಡಲೂ ಸಾಧ್ಯವಿಲ್ಲದಂತಹ ಜನರಾಶಿ ಬಸವನಗುಡಿ ಮುಖ್ಯ ರಸ್ತೆಯಲ್ಲಿ ಕಂಡುಬಂದಿತು.

ರಸ್ತೆಯ ಎರಡೂ ಬದಿಯ ಜೊತೆಗೆ ಮಧ್ಯಭಾಗದಲ್ಲೂ ಕಡಲೆಕಾಯಿಯನ್ನು ರಾಶಿರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಹಸಿ, ಒಣ, ಬೇಯಿಸಿದ, ಹುರಿದ ಕಡಲೆಕಾಯಿ ಸೇರು ಲೆಕ್ಕಾಚಾರದಲ್ಲಿ ₹30ರಿಂದ ₹60ರವರೆಗೂ ದರ ನಿಗದಿಯಾಗಿತ್ತು. ನಾಲ್ಕಾರು ಬಗೆಯ ಕಡಲೆಕಾಯಿಯ ಆಕರ್ಷಣೆಯ ಜತೆಗೆ ಬೇಲ್‌, ಬಜ್ಜಿ, ಮಸಾಲ ಹಪ್ಪಳ, ಆಲೂ ಟ್ವಿಸ್ಟರ್‌ ಸೇರಿದಂತೆ ವಿವಿಧ ಭಕ್ಷ್ಯಗಳು, ಆಟಿಕೆ, ಜಗಮಗಿಸುವ ಬೆಳಕಿನಲ್ಲಿ ಆಟದ ಮೋಜು ಇಲ್ಲಿತ್ತು.

‘ಕಡಲೆಕಾಯಿ ಪರಿಷೆಗಿಂತ ಹಳ್ಳಿಯ ಜಾತ್ರೆಯ ಸೊಬಗು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಮೊದಲು ವಿವಿಧ ತಳಿಗಳ ಕಡಲೆಕಾಯಿಗಳನ್ನು ಸವಿಯಲು, ಖರೀದಿಸಲು ಪರಿಷೆಗೆ ಬರುತ್ತಿದ್ದವು. ಇದೀಗ ಜಾತ್ರೆ ಆಟಿಕೆಗಳ ನಡುವೆ ಕಡಲೆಕಾಯಿ ರಾಶಿ ಮರೆಯಾಗಿ ಹೋಗಿದೆ’ ಎಂದು ಬಸವನಗುಡಿ ನಿವಾಸಿ ರಾಮಕೃಷ್ಣ ಬೇಸರಿಸಿದರು.

ಪ್ಲಾಸ್ಟಿಕ್‌ ಮುಕ್ತ: ’ಕಡಲೆಕಾಯಿ ಖರೀದಿಗೆ ಪ್ಲಾಸ್ಟಿಕ್‌ ಚೀಲ ಕೊಡುವುದಿಲ್ಲ’ ಎಂದು ಮಾರಾಟಗಾರರು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಅಕ್ಕಪಕ್ಕದಲ್ಲಿ ಬಟ್ಟೆ ಚೀಲಗಳನ್ನೂ ಮಾರಾಟ ಮಾಡಲಾಗುತ್ತಿತ್ತು. ‘ಪ್ಲಾಸ್ಟಿಕ್‌ ಮುಕ್ತ ಕಡಲೆಕಾಯಿ ಪರಿಷೆ’ ಎಂಬ ಫಲಕಗಳೂ ಇದ್ದವು.

‘ಇದು ಪರಿಷೆಯಾಗಿ ಉಳಿದಿಲ್ಲ, ಜಾತ್ರೆಯಂತಾಗಿದೆ. ಜಾತ್ರೆ ಎಂದರೆ ಎಲ್ಲವೂ ಸಿಗುವ ತಾಣ. ಸೌಂದರ್ಯ ಸಾಧನಗಳು, ಅಡುಗೆ ಮನೆಗಳ ಸಾಮಗ್ರಿ, ಅಲಂಕಾರಿಕ ವಸ್ತುಗಳು ಸೇರಿದಂತೆ ಮನೆಗೆ ಬೇಕಾದ ಎಲ್ಲ ರೀತಿಯ ವಸ್ತುಗಳ ಮಾರಾಟವೂ ಇಲ್ಲಿದೆ. ಎಲ್ಲ ಧರ್ಮದವರೂ ಇಲ್ಲಿ ವ್ಯಾಪಾರಿಗಳಾಗಿದ್ದಾರೆ’ ಎಂದು ಹನುಮಂತನಗರದ ಜಗನ್ನಾಥ್‌ ಹೇಳಿದರು.

ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸೇರಿದ್ದ ಜನ
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸೇರಿದ್ದ ಜನ ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿಧಾನಪರಿಷತ್ ಸದಸ್ಯ ಶರವಣ ಶಾಸಕರಾದ ರವಿ ಸುಬ್ರಮಣ್ಯ ಉದಯ್ ಬಿ. ಗರುಡಾಚಾರ್ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿಧಾನಪರಿಷತ್ ಸದಸ್ಯ ಶರವಣ ಶಾಸಕರಾದ ರವಿ ಸುಬ್ರಮಣ್ಯ ಉದಯ್ ಬಿ. ಗರುಡಾಚಾರ್ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿಧಾನಪರಿಷತ್ ಸದಸ್ಯ ಶರವಣ ಶಾಸಕರಾದ ರವಿ ಸುಬ್ರಮಣ್ಯ ಉದಯ್ ಬಿ. ಗರುಡಾಚಾರ್ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿಧಾನಪರಿಷತ್ ಸದಸ್ಯ ಶರವಣ ಶಾಸಕರಾದ ರವಿ ಸುಬ್ರಮಣ್ಯ ಉದಯ್ ಬಿ. ಗರುಡಾಚಾರ್ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಕಡಲೆಕಾಯಿ ಪರಿಷೆ ಅಂಗವಾಗಿ ಕೆಂಪಾಂಬುದಿ ಕೆರೆಯಲ್ಲಿ ನಂದಿ ವಿಗ್ರಹ ಸಮೇತ ತೆಪ್ಪೋತ್ಸವ ನಡೆಯಿತು
-ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಕಡಲೆಕಾಯಿ ಪರಿಷೆ ಅಂಗವಾಗಿ ಕೆಂಪಾಂಬುದಿ ಕೆರೆಯಲ್ಲಿ ನಂದಿ ವಿಗ್ರಹ ಸಮೇತ ತೆಪ್ಪೋತ್ಸವ ನಡೆಯಿತು -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ಕೋಟ್ಯಂತರ ವಹಿವಾಟು!

ಪರಿಷೆಯಲ್ಲಿ ಕಡಲೆಕಾಯಿ ಮಾರಾಟಕ್ಕೆ ಮಳಿಗೆ ಹಾಕಲು ಧಾರ್ಮಿಕ ಪರಿಷತ್‌ನ ಹರಾಜಿನಲ್ಲಿ ಪಾಲ್ಗೊಳ್ಳಬೇಕು. ಅಲ್ಲಿ ಹಣ ಪಾವತಿಸಿದ ಮೇಲೆ ಮಳಿಗೆಗೆ ಅವಕಾಶವಿದೆ. ಶುಕ್ರವಾರದಿಂದಲೇ ಸಾಕಷ್ಟು ಮಂದಿ ಮಳಿಗೆ ಹಾಕಿದ್ದರು. ‘ಕೋಟ್ಯಂತರ ರೂಪಾಯಿಗಳ ವಹಿವಾಟು ಪರಿಷೆಯಲ್ಲಿ ನಡೆದಿದೆ’ ಎಂದು ವ್ಯಾಪಾರಿ ನರಸಿಂಹನ್‌ ಹೇಳಿದರು. ಬಿಲ್‌ ಅಥವಾ ಲೆಕ್ಕಾಚಾರದ ವ್ಯಾಪಾರವಲ್ಲದ್ದರಿಂದ ಇಷ್ಟೇ ವಹಿವಾಟು ನಡೆದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದರು. ನಗರದ ಸುತ್ತಮುತ್ತಲಿನ ಜಿಲ್ಲೆ ಹಾಗೂ ರಾಜ್ಯಗಳಿಂದ ಕಡಲೆಕಾಯಿಯನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ನೇರವಾಗಿ ಬಂದು ಮಾರಾಟ ಮಾಡುತ್ತಿರುವುದು ಕಂಡುಬರಲಿಲ್ಲ. ಕೋಲಾರ ಚಿಕ್ಕಬಳ್ಳಾಪುರ ತುಮಕೂರು ರಾಮನಗರ ಜಿಲ್ಲೆ ಸೇರಿದಂತೆ ತಮಿಳುನಾಡು ಆಂಧ್ರಪ್ರದೇಶದಿಂದಲೂ ಕಡಲೆಕಾಯಿ ತಂದು ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT