ಆನೆ ದಂತದ ಶೂ ರಿಮೂವರ್ ಸೇರಿ ₹1 ಕೋಟಿ ಮೌಲ್ಯದ ಪ್ರಾಚೀನ ವಸ್ತುಗಳ ಜಪ್ತಿ

ಬೆಂಗಳೂರು: ಆನೆ ದಂತದಿಂದ ತಯಾರಿಸಿರುವ ‘ಶೂ ರಿಮೂವರ್’ ಸೇರಿದಂತೆ ಅಂದಾಜು ₹1 ಕೋಟಿ ಮೌಲ್ಯದ ಪ್ರಾಚೀನ ಹಾಗೂ ಅಮೂಲ್ಯ ವಸ್ತುಗಳನ್ನು ಮಾರಲು ಮುಂದಾಗಿದ್ದ ಆರ್ಯನ್ ಖಾನ್ (32) ಎಂಬಾತನನ್ನು ಕಾಡುಗೊಂಡನಹಳ್ಳಿ (ಕೆ.ಜಿ ಹಳ್ಳಿ) ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಯು ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿಯಾಗಿದ್ದು, ಹಣದ ಅವಶ್ಯಕತೆ ಇದ್ದಿದ್ದರಿಂದ ತನ್ನ ಬಳಿ ಇದ್ದ ವಸ್ತುಗಳನ್ನು ಮಾರಲು ಮುಂದಾಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ನಗರದಲ್ಲಿ ವಾಸವಿದ್ದ ಆಂಗ್ಲೊ–ಇಂಡಿಯನ್ ದಂಪತಿಯ ಮನೆಯಲ್ಲಿ ಆರೋಪಿಯ ಅಜ್ಜಿ ಕೆಲಸ ಮಾಡುತ್ತಿದ್ದರು. ದಂಪತಿ ನಿಧನರಾಗುವ ಮುನ್ನ ತಮ್ಮ ಬಳಿ ಇದ್ದ ಅಮೂಲ್ಯ ವಸ್ತುಗಳನ್ನೆಲ್ಲಾ ಅಜ್ಜಿಗೆ ನೀಡಿದ್ದರು. ಅಜ್ಜಿ ಇತ್ತೀಚೆಗೆ ತೀರಿಕೊಂಡಿದ್ದರು. ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆತ ಹಣಕ್ಕಾಗಿ ಮನೆಯಲ್ಲಿದ್ದ ಪ್ರಾಚೀನ ವಸ್ತುಗಳನ್ನು ಮಾರಲು ತೀರ್ಮಾನಿಸಿದ್ದ. ಈ ವಿಷಯವನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಠಾಣೆ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್ ಬಳಿ ವ್ಯಕ್ತಿಯೊಬ್ಬ ಪ್ರಾಚೀನ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.