ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ಕೇಂದ್ರವಾಗಿ ಕಲಾಗ್ರಾಮ

ವರ್ಷದ 365 ದಿನಗಳು ಸಾಂಸ್ಕೃತಿಕ ಚಟುವಟಿಕೆ l ರೂಪುರೇಷೆ ಸಿದ್ಧಪಡಿಸಿದ ಇಲಾಖೆ
Last Updated 18 ಸೆಪ್ಟೆಂಬರ್ 2020, 20:16 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮವನ್ನು ವಿವಿಧ ಕಲಾ ಪ್ರಕಾರಗಳತರಬೇತಿ ಹಾಗೂ ಪ್ರದರ್ಶನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ಈ ಸಂಬಂಧ ಇಲಾಖೆಯ ಅಧಿಕಾರಿಗಳು ರೂಪರೇಷೆಗಳನ್ನು ಸಿದ್ಧಪಡಿಸಿದ್ದಾರೆ.30 ಎಕರೆಯಲ್ಲಿ ವ್ಯಾಪಿಸಿಕೊಂಡಿರುವ ಕಲಾಗ್ರಾಮವನ್ನು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಸೂಕ್ತ ಮೂಲಸೌಕರ್ಯ ಇಲ್ಲದ ಕಾರಣ ಕಲಾಗ್ರಾಮದಲ್ಲಿ ಪ್ರತಿವರ್ಷ ಬೆರಳಣಿಕೆಯಷ್ಟು ಕಾರ್ಯಕ್ರಮಗಳಷ್ಟೇ ನಡೆಯುತ್ತಿದ್ದವು. ಕಲಾವಿದರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯವಿರದ್ದರಿಂದ ಕಲಾ ಶಿಬಿರ, ತರಬೇತಿ ಹಾಗೂ ಪ್ರದರ್ಶನಗಳಿಗೆ ಕೂಡ ಸಮಸ್ಯೆಯಾಗಿತ್ತು. ಕಳೆದ ವರ್ಷಾಂತ್ಯಕ್ಕೆ ಕಲಾಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಸಿ.ಟಿ. ರವಿ ಅವರು, ಸಮಗ್ರ ಅಭಿವೃದ್ಧಿಗೆ ರೂಪರೇಷೆ ಸಿದ್ಧ‍ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಲಾಗ್ರಾಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗ, ಶಿಲ್ಪಕಲಾ ಅಕಾಡೆಮಿಯ ಗ್ಯಾಲರಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ನಾಲ್ಕು ಬಯಲು ರಂಗಮಂದಿರಗಳು ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಇವೆ. ಅಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಡಳಿತ ಕಚೇರಿ ತಲೆಯೆತ್ತುತ್ತಿದೆ. ಅರ್ಧಕ್ಕೆ ಸ್ಥಗಿತವಾಗಿದ್ದ ಗ್ರಾಫಿಕ್ ಸ್ಟುಡಿಯೊ ನಿರ್ಮಾಣ ಕಾರ್ಯ ಪುನರಾರಂಭವಾಗಿದೆ. ನೀರಿನ ವ್ಯವಸ್ಥೆ, ವಸತಿಗೃಹ, ಶೌಚಾಲಯ ಸೇರಿದಂತೆ ವಿವಿಧ ಮೂಲಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.

ಅತಿಥಿಗೃಹ ನಿರ್ಮಾಣ: ವರ್ಷದ 365 ದಿನಗಳೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ರೂಪರೇಷೆ ಸಿದ್ಧ‍ಪಡಿ
ಸಲಾಗಿದೆ. ಸಾಂಸ್ಕೃತಿಕ ಸಮುಚ್ಛಯದಲ್ಲಿ ಕಲಾ ಪ್ರದರ್ಶನ, ಶಿಲ್ಪಕಲೆ, ಲಲಿತಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ಸಂಬಂಧಿಸಿದ ಶಿಬಿರ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ನಾಟಕ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತದೆ. ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಕೂಡ ಸಹಕಾರ ನೀಡಿದೆ. ಅತಿಥಿಗೃಹಗಳನ್ನು ಕೂಡ ನಿರ್ಮಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಕಲಾ ಚಟುವಟಿಕೆಗಳಿಗೆ ಉತ್ತಮ ಸ್ಥಳಾವಕಾಶ ಹಾಗೂ ವಾತಾವರಣವಿದೆ. ಮೂಲಸೌಕರ್ಯದ ಕೊರತೆಯಿಂದ ಅಲ್ಲಿ ಅಷ್ಟಾಗಿ ಕಲಾ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಈಗ ಕಲಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT