ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಚಿಕ್ಕ ತಾಯಿ (43) ಎನ್ನುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದಾರೆ ಎನ್ನಲಾದ ಪತಿ ನಾಗರತ್ನಂ ಪರಾರಿಯಾಗಿದ್ದಾರೆ.
‘ಕರೆಕಲ್ಲು ಬಳಿಯ ಗುರುಪ್ರಿಯಾ ಚೌಟ್ರಿ ರಸ್ತೆ ನಿವಾಸಿ ಚಿಕ್ಕತಾಯಿ ಅವರನ್ನು ಆಯುಧದಿಂದ ಹೊಡೆದು ಗುರುವಾರ ರಾತ್ರಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿರುವ ಆರೋಪಿ ನಾಗರತ್ನಂ ಪರಾರಿಯಾಗಿದ್ದಾನೆ. ಮಗ ರಾಜು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚಿಕ್ಕತಾಯಿ ಹಾಗೂ ನಾಗರತ್ನಂ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಗುರುಪ್ರಿಯಾ ಚೌಟ್ರಿ ರಸ್ತೆಯ ಮನೆಯಲ್ಲಿ ಮಗನ ಜೊತೆ ದಂಪತಿ ವಾಸವಿದ್ದರು. ಆರೋಪಿ ನಾಗರತ್ನಂ, ಮದ್ಯ ವ್ಯಸನಿ. ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದ. ನಿತ್ಯವೂ ಮದ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಹಲವು ಬಾರಿ ಹಲ್ಲೆ ಸಹ ಮಾಡಿದ್ದ’ ಎಂದು ತಿಳಿಸಿದರು.
‘ಮಗ ರಾಜು, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ರಾತ್ರಿ 8 ಗಂಟೆಗೆ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ಇದೇ ವೇಳೆ ಪತ್ನಿ ಜೊತೆ ಜಗಳ ತೆಗೆದಿದ್ದ ನಾಗರತ್ನಂ, ಆಯುಧದಿಂದ ಹೊಡೆದು ಕೊಲೆ ಮಾಡಿದ್ದ. ಸೋಪಾ ಮೇಲೆ ಮೃತದೇಹ ಇರಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.’
‘ದಂಪತಿ ಜಗಳ ಗಮನಿಸಿದ್ದ ಸಂಬಂಧಿಕರು, ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕಾರ್ಖಾನೆಯಿಂದ ಮನೆಗೆ ಬಂದಿದ್ದ ಮಗನಿಗೆ ತಾಯಿಯ ಮೃತದೇಹ ಕಂಡಿತ್ತು. ಬಳಿಕವೇ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.