ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಯ’ ತಪ್ಪಿದ ಕಲಾವಿದರ ಬದುಕು

ನೀತಿ ಸಂಹಿತೆ, ಬಿಸಿಲಿನಿಂದಾಗಿ ಜನ‍ಪದ ಸೇರಿ ವಿವಿಧ ಕಲಾವಿದರಿಗೆ ಸಿಗದ ಕಾರ್ಯಕ್ರಮ
Published 30 ಏಪ್ರಿಲ್ 2024, 22:51 IST
Last Updated 30 ಏಪ್ರಿಲ್ 2024, 22:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅತಿಯಾದ ಉಷ್ಣಾಂಶ ಹಾಗೂ ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳ ಆಯೋಜನೆಗೆ ನಿರಾಸಕ್ತಿ ತಾಳಿವೆ. ಇದರಿಂದಾಗಿ ಕಲೆಯನ್ನೇ ನಂಬಿಕೊಂಡಿದ್ದವರ ಬದುಕು ‘ಲಯ’ ತಪ್ಪಿದಂತಾಗಿದೆ. 

ಏಪ್ರಿಲ್–ಮೇ ತಿಂಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಪ್ರತಿ ವರ್ಷ ಈ ಅವಧಿಯಲ್ಲಿ ತಿಂಗಳು ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಈ ಎರಡೂ ತಿಂಗಳು ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ, ಬಿಸಿಲಿನ ತಾಪವೂ ಹೆಚ್ಚಾಗಿರುವುದರಿಂದ ಸಂಘ–ಸಂಸ್ಥೆಗಳು ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಜನಪದ ಸೇರಿ ವಿವಿಧ ಕಲಾವಿದರಿಗೆ ಕಳೆದೊಂದು ತಿಂಗಳಿನಿಂದ ಅಷ್ಟಾಗಿ ಅವಕಾಶಗಳು ಸಿಗದಂತಾಗಿದೆ. ಕಲಾವಿದರು ವ್ಯಾಪಾರ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. 

ನೀತಿ ಸಂಹಿತೆಯಿಂದಾಗಿ ಜಯಂತಿಗಳಂತಹ ವಾರ್ಷಿಕ ಕಾರ್ಯಕ್ರಮಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಳವಾಗಿ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ದೇವರ ದಾಸಿಮಯ್ಯ ಜಯಂತಿ, ಭಗವಾನ್ ಮಹಾವೀರ ಜಯಂತಿ, ಅಕ್ಕಮಹಾದೇವಿ ಜಯಂತಿ, ಮೇ ತಿಂಗಳಲ್ಲಿ ಬಸವ ಜಯಂತಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ, ಶಂಕರಾಚಾರ್ಯ ಜಯಂತಿ ಹಾಗೂ ಭಗೀರಥ ಜಯಂತಿ ನಿಗದಿಯಾಗಿದ್ದವು. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಇದರಿಂದಾಗಿ ಕಲಾವಿದರಿಗೆ ಅವಕಾಶಗಳು ಇಲ್ಲದಂತಾಗಿದೆ. 

ಕಾರ್ಯಕ್ರಮಕ್ಕಿಲ್ಲ ಅನುದಾನ: ಸಂಸ್ಕೃತಿ ಇಲಾಖೆಯು ಈ ಬಾರಿ ಧನಸಹಾಯವನ್ನು ಸಂಘ–ಸಂಸ್ಥೆಗಳಿಗೆ ಕಂತು ರೂಪದಲ್ಲಿ ಬಿಡುಗಡೆ ಮಾಡಿತ್ತು. ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಶೇ 31ರಷ್ಟು, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದವರಿಗೆ ಶೇ 33ರಷ್ಟು ಹಾಗೂ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರಿಗೆ ಶೇ 40ರಷ್ಟು ಅನುದಾನ ಒದಗಿಸಿತ್ತು. ಇನ್ನುಳಿದ ಹಣ ಯಾವಾಗ ಬರುತ್ತದೆ ಎಂಬ ಖಚಿತತೆ ಇಲ್ಲವಾದ್ದರಿಂದ ಸಂಘ–ಸಂಸ್ಥೆಗಳೂ ಕಲಾವಿದರನ್ನು ಆಹ್ವಾನಿಸಿ, ಕಾರ್ಯಕ್ರಮಗಳನ್ನು ನೀಡಲು ಮುಂದಾಗುತ್ತಿಲ್ಲ.

‘ಕಾರ್ಯಕ್ರಮಗಳು ಅಷ್ಟಾಗಿ ನಡೆಯದಿದ್ದರಿಂದ ಎರಡು ತಿಂಗಳಿಂದ ಅವಕಾಶಗಳು ದೊರೆಯುತ್ತಿಲ್ಲ. ಇದರಿಂದ ಆರ್ಥಿಕ ಹೊಡೆತ ಅನುಭವಿಸಿದ್ದೇವೆ’ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದರು. 

‘ಈ ಸಂದರ್ಭದಲ್ಲಿ ಸಂಸ್ಕೃತಿ ಇಲಾಖೆಯಿಂದಲೂ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಧನಸಹಾಯವನ್ನು ಕಂತು ರೂಪದಲ್ಲಿ ನೀಡಿದ್ದರಿಂದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳು ಗೊಂದಲದಲ್ಲಿವೆ’ ಎಂದು ಕಲಾವಿದ ಜಯಸಿಂಹ ಎಸ್. ಬೇಸರ ವ್ಯಕ್ತಪಡಿಸಿದರು. 

ಪ್ರತಿ ವರ್ಷ ಈ ಅವಧಿಯಲ್ಲಿ ತಿಂಗಳಿಗೆ ಕನಿಷ್ಠ ಹತ್ತು ಕಾರ್ಯಕ್ರಮಗಳಾದರೂ ಸಿಗುತ್ತಿದ್ದವು. ಈ ವರ್ಷ ಕಾರ್ಯಕ್ರಮಗಳು ಅಷ್ಟಾಗಿ ಸಿಗುತ್ತಿಲ್ಲ. ಬಿಸಿಲು ನೀತಿ ಸಂಹಿತೆಯಿಂದ ಸಮಸ್ಯೆಯಾಗಿದೆ
ಮಲ್ಲೇಶ್ ಎಂ. ಗೊರವರ ಕುಣಿತ ಕಲಾವಿದ
ಈ ವರ್ಷ ಬಿಸಿಲು ಜಾಸ್ತಿ ಇರುವುದರಿಂದ ಮಧ್ಯಾಹ್ನದ ಅವಧಿಯಲ್ಲಿ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕಾರ್ಯಕ್ರಮಗಳೂ ಬರುತ್ತಿಲ್ಲ
ಸಂಕೀರ್ತ ಹುಲಿವೇಷ ಕಲಾವಿದ

ಬೆಳಿಗ್ಗೆ ಸಂಜೆ ಪ್ರದರ್ಶನ

ನಗರದಲ್ಲಿ ಏಪ್ರಿಲ್ ತಿಂಗಳ ಬಹುತೇಕ ದಿನಗಳು ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗಿದೆ. ನಿರೀಕ್ಷಿತ ಮಳೆ ಬಾರದಿದ್ದರಿಂದ ದಿನದ ಬಹುತೇಕ ಅವಧಿ ಉಷ್ಣ ವಾತಾವರಣದಿಂದ ಕೂಡಿದ್ದು ಬಿಸಿ ಗಾಳಿ ಕಾಣಿಸಿಕೊಳ್ಳುತ್ತಿದೆ. ಮಧ್ಯಾಹ್ನದ ಅವಧಿಯಲ್ಲಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಇದರಿಂದಾಗಿ ಡೊಳ್ಳು ಕುಣಿತ ಪಟ ಕುಣಿತ ಗೊರವರ ಕುಣಿತ ಪೂಜಾ ಕುಣಿತದಂತಹ ಜನಪದ ಕಲಾವಿದರು ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ಮಾತ್ರ ಹೊರಾಂಗಣ ಪ್ರದರ್ಶನಕ್ಕೆ ಸಮ್ಮತಿ ಸೂಚಿಸುತ್ತಿದ್ದಾರೆ. ಮಧ್ಯಾಹ್ನದ ಅವಧಿಯಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಬಹಿರಂಗ ಕಾರ್ಯಕ್ರಮಗಳಿಗೆ ಕಲಾವಿದರು ಹಿಂದೇಟು ಹಾಕುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT