ಶನಿವಾರ, ಜುಲೈ 2, 2022
22 °C
ನಗರದ ಸಾವಿರ ಕಡೆ ಪುಸ್ತಕಗಳ ರ್‍ಯಾಕ್ ಇರಿಸಲು ವೀರಲೋಕ ಬುಕ್ಸ್‌ ಸಂಸ್ಥೆ ಯೋಜನೆ

ಬೆಂಗಳೂರು: ಹೋಟೆಲ್, ಮಾಲ್‌ಗಳಲ್ಲೂ ಸಿಗಲಿದೆ ಕನ್ನಡ ಪುಸ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯಲಿವೆ. 

ವೀರಲೋಕ ಬುಕ್ಸ್‌ ಪ್ರೈ.ಲಿ. ಸಂಸ್ಥೆಯು ನಗರದಲ್ಲಿ ಸಾವಿರ ಕಡೆ ಪುಸ್ತಕಗಳ ರ್‍ಯಾಕ್ ಇರಿಸಲು ಮುಂದಾಗಿದೆ. ಕಾರ್ಪೋರೇಟ್ ಶೈಲಿಯಲ್ಲಿ ಕನ್ನಡ ಪುಸ್ತಕಗಳಿಗೆ ಪ್ರಚಾರ ನೀಡಿ, ಓದುಗರಿದ್ದಲ್ಲಿಯೇ ಪುಸ್ತಕ ಒದಗಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ನಿಗದಿತ ಮಳಿಗೆ ಹಾಗೂ ಕೇಂದ್ರಗಳ ಮುಖ್ಯಸ್ಥರ ಜತೆಗೆ ಪುಸ್ತಕ ಸಂಸ್ಥೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಪುಸ್ತಕದ ರ್‍ಯಾಕ್‌ನಲ್ಲಿ ಪ್ರಕಟಗೊಂಡ ಹೊಸ ಕನ್ನಡದ ಪುಸ್ತಕಗಳು ಲಭ್ಯವಿರಲಿದ್ದು, ಆಸ್ತಕರು ಅಲ್ಲಿಯೇ ಹಣ ಪಾವತಿಸಿ ಪುಸ್ತಕ ಖರೀದಿಸಬಹುದಾಗಿದೆ. ಈ ವ್ಯವಸ್ಥೆಗೆ ಜೂ.8 ರಂದು ಚಾಲನೆ ದೊರೆಯಲಿದೆ. 

ಪುಸ್ತಕಗಳ ಮಾರಾಟಕ್ಕೆ ಸಂಸ್ಥೆಯು ಕಾಲ್ ಸೆಂಟರ್‌ ಅನ್ನು ಕೂಡ ಸಿದ್ಧಪಡಿಸಿದ್ದು, 11 ಲಕ್ಷ ಮಂದಿಯ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿದೆ. ಈ ಸಂಖ್ಯೆಗೆ ಕರೆ ಮಾಡಿ, ಪ್ರಕಟಗೊಂಡ ಕನ್ನಡದ ಹೊಸ ಪುಸ್ತಕಗಳ ಬಗ್ಗೆ ತಿಳಿಸಲಾಗುತ್ತದೆ. ಪುಸ್ತಕ ಖರೀದಿಸಲು ಇಚ್ಛಿಸಿದಲ್ಲಿ, ಮನೆಗೆ ತಲುಪಿಸಲಾಗುತ್ತದೆ. ಹಣ ಪಾವತಿ ಮೊಬೈಲ್ ಆ್ಯಪ್‌ಗಳ ಮೂಲಕ ಪುಸ್ತಕದ ದರ ಪಾವತಿಸಬಹುದಾಗಿದೆ. 

ಓದುಗರ ಸಂಖ್ಯೆ ಹೆಚ್ಚಳ: ‘ಕಟ್ಟ ಕಡೆಯ ಓದುಗನಿಗೂ ಅವನಿದ್ದ ಕಡೆಯೇ ಪುಸ್ತಕ ದೊರೆಯುವಂತೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಕೈಂಕರ್ಯಕ್ಕೆ ಮುಂದಾಗಿದ್ದೇವೆ. ನಗರದ ವಿವಿಧೆಡೆ ಪುಸ್ತಕಗಳ ರ್‍ಯಾಕ್ ಇರಿಸಲಾಗುತ್ತದೆ. ಕಾಲ್‌ ಸೆಂಟರ್ ಸಹ ಪ್ರಾರಂಭಿಸಲಾಗುತ್ತಿದೆ. ಸಿನಿಮಾ ಪೋಸ್ಟರ್‌ಗಳ ಮಾದರಿಯಲ್ಲಿಯೇ ಪುಸ್ತಕಗಳ ಪೋಸ್ಟರ್‌ಗಳನ್ನೂ ಪ್ರದರ್ಶಿಸಲಾಗುತ್ತದೆ’ ಎಂದು ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದರು. 

‘ಪ್ರತಿ ಲೇಖಕರಿಗೆ 500ರಿಂದ 10 ಸಾವಿರ ಓದುಗರನ್ನು ಒದಗಿಸಿಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕನ್ನಡ ಪುಸ್ತಕೋದ್ಯಮ ಬೆಳೆಯಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ವಿವರಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು