ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ 20 ಸಾವಿರ ಪುಸ್ತಕ ಡಿಜಿಟಲೀಕರಣ

16 ಭಾಷೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳು ಲಭ್ಯ *ಇಲ್ಲಿನ ಗಾಂಧಿಭವನದಲ್ಲಿ ಪುಸ್ತಕಗಳಿಗೆ ಡಿಜಿಟಲ್ ಸ್ಪರ್ಶ
Published 23 ಫೆಬ್ರುವರಿ 2024, 20:38 IST
Last Updated 23 ಫೆಬ್ರುವರಿ 2024, 20:38 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿ ಸಾಹಿತ್ಯ ಸೇರಿ ಅಪರೂಪದ ಪುಸ್ತಕಗಳ ಡಿಜಿಟಲೀಕರಣ ಪ್ರಕ್ರಿಯೆ ನಗರದಲ್ಲಿ ಭರದಿಂದ ಸಾಗಿದ್ದು, ‘ಸರ್ವೆಂಟ್ಸ್ ಆಫ್ ನಾಲೆಡ್ಜ್’ ವೇದಿಕೆಯು ಈಗಾಗಲೇ 20 ಸಾವಿರಕ್ಕೂ ಅಧಿಕ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿದೆ. 

ಇಲ್ಲಿನ ಗಾಂಧಿಭವನದಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ವೇದಿಕೆಯು ವಿವಿಧ ಸಂಸ್ಥೆಗಳು ಹಾಗೂ ಗ್ರಂಥಾಲಯಗಳ ಸಹಯೋಗದಲ್ಲಿ ಈ ಕಾರ್ಯ ಮಾಡುತ್ತಿದೆ. ಈಗಾಗಲೇ 16 ಭಾಷೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳ ಡಿಜಿಟಲೀಕರಣ ನಡೆದಿದೆ. ಇದರ ಜತೆಗೆ ಅಪರೂಪದ ಛಾಯಾಚಿತ್ರಗಳು, ನಿಯತಕಾಲಿಕೆಗಳು, ಹಸ್ತಪ್ರತಿಗಳನ್ನೂ ಸ್ಕ್ಯಾನ್‌ ಮಾಡಿ, ಡಿಜಿಟಲ್‌ ರೂಪದಲ್ಲಿ ಒದಗಿಸಲಾಗುತ್ತಿದೆ. ಇದರಿಂದಾಗಿ ಸುಲಭವಾಗಿ ನಿರ್ದಿಷ್ಟ ಪುಸ್ತಕದ ನಿಖರ ಪುಟಗಳನ್ನೂ ಹುಡುಕಲು ಸಾಧ್ಯವಾಗುತ್ತಿದೆ. 

‘ಸರ್ವೆಂಟ್ಸ್ ಆಫ್ ನಾಲೆಡ್ಜ್’ ವೇದಿಕೆಯಡಿ 2018ರಿಂದ ಈ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಲಾಭ ರಹಿತ ವೇದಿಕೆಯಾಗಿದ್ದು, ಅಮೆರಿಕದ ಕಾರ್ಲ್‌ ಮಾಲಮಡ್ ಹಾಗೂ ಇಲ್ಲಿನ ತಂತ್ರಜ್ಞಾನ ಪರಿಣತ ಓಂ ಶಿವಪ್ರಕಾಶ್ ಈ ವೇದಿಕೆಯನ್ನು ಹುಟ್ಟು ಹಾಕಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಬಿ.ಎಂ.ಶ್ರೀ. ಪ್ರತಿಷ್ಠಾನ, ರಾಷ್ಟ್ರೀಯ ಕಾನೂನು ಶಾಲೆ, ಕರ್ನಾಟಕ ಇತಿಹಾಸ ಅಕಾಡೆಮಿ, ಗಾಂಧಿ ಭವನ ಸೇರಿ ವಿವಿಧ ಸಂಸ್ಥೆಗಳು, ಗ್ರಂಥಾಲಯಗಳು ಹಾಗೂ ಲೇಖಕರ ಪುಸ್ತಕಗಳು ಡಿಜಿಟಲ್‌ ವೇದಿಕೆಯಲ್ಲಿ ಲಭ್ಯವಾಗುತ್ತಿವೆ. 

15 ಲಕ್ಷ ಪುಟಗಳ ಡಿಜಿಟಲೀಕರಣ: ಪ್ರತಿ ತಿಂಗಳು 15 ಲಕ್ಷ ಪುಟಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಸ್ಕ್ಯಾನಿಂಗ್ ಯಂತ್ರಗಳ ಜತೆಗೆ ಹೆಚ್ಚಿನ ರೆಸಲ್ಯೂಶನ್‌ ಇರುವ ಡಿಜಿಟಲ್‌ ಎಸ್‌ಎಲ್‌ಆರ್‌ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು 12 ಮಂದಿ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜತೆಗೂ ಡಿಜಿಟಲೀಕರಣಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ಪುಸ್ತಕಗಳೂ ಡಿಜಿಟಲ್‌ ರೂಪದಲ್ಲಿ ಶೀಘ್ರದಲ್ಲಿಯೇ ದೊರೆಯಲಿವೆ. 

‘ಡಿಜಿಟಲೀಕರಣ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಹತ್ವದ, ಮರುಪ್ರಕಟಿಸಲು ಸಾಧ್ಯವಾಗದ ಪುಸ್ತಕಗಳನ್ನು ಆದ್ಯತೆ ಮೇರೆಗೆ ಡಿಜಿಟಲೀಕರಣ ಮಾಡಲಾಗುತ್ತಿದೆ. ನವದೆಹಲಿಯ 120 ವರ್ಷ ಹಳೆಯದಾದ ಮೋತಿಲಾಲ್ ಬನಾರಸಿದಾಸ್ ಪ್ರಕಟಣೆಗಳ ಡಿಜಿಟಲೀಕರಣಕ್ಕೂ ಒಪ್ಪಂದ ಮಾಡಿಕೊಳ್ಳಲಾಗಿದೆ. ನಮ್ಮ ಕಾರ್ಯ ಕೇವಲ ಸ್ಕ್ಯಾನಿಂಗ್ ಆಗಿರದೆ, ಶ್ರೀಮಂತ ಸಾಹಿತ್ಯದ ದಾಖಲೀಕರಣವಾಗಿದೆ’ ಎಂದು ‘ಸರ್ವೆಂಟ್ಸ್ ಆಫ್ ನಾಲೆಡ್ಜ್’ ವೇದಿಕೆಯ ಓಂ ಶಿವಪ್ರಕಾಶ್ ತಿಳಿಸಿದರು. 

Quote - ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಬಗ್ಗೆ ಮಾತನಾಡಲಾಗುತ್ತಿದ್ದರೂ ಡಿಜಿಟಲೀಕರಣಕ್ಕೆ ಸೂಕ್ತ ಆದ್ಯತೆ ದೊರೆತಿಲ್ಲ. ಕನ್ನಡದ ಎಲ್ಲ ಸಾಹಿತ್ಯ ಮುಕ್ತವಾಗಿ ದೊರೆಯಬೇಕೆಂಬುದು ನಮ್ಮ ಉದ್ದೇಶ ।ಓಂ ಶಿವಪ್ರಕಾಶ್ ತಂತ್ರಜ್ಞಾನ ಪರಿಣತ

ಗಾಂಧಿ ಭವನ ಪ್ರಕಟಣೆಗಳು ಲಭ್ಯ ಗಾಂಧಿ ಭವನದಲ್ಲಿರುವ ಮೂರು ಗ್ರಂಥಾಲಯಗಳ 12 ಸಾವಿರ ಪುಸ್ತಕಗಳನ್ನು ಕಳೆದ ಅಕ್ಟೋಬರ್‌ನಲ್ಲಿ ಡಿಜಿಟಲೀಕರಣ ಮಾಡಲಾಗಿದೆ. ಅವುಗಳಲ್ಲಿ ಸಾವಿರಕ್ಕೂ ಅಧಿಕ ಪುಸ್ತಕಗಳು ಈಗಾಗಲೇ ‘ಇಂಟರ್ನೆಟ್‌ ಆರ್ಕೈವ್‌’ನಲ್ಲಿ ಲಭ್ಯವಿದೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ಈ ಪುಸ್ತಕಗಳನ್ನು ಓದಿದ್ದಾರೆ. ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವೂ ಇದ್ದು ಪಿಡಿಎಫ್‌ ಸೇರಿ ವಿವಿಧ ಮಾದರಿಯಲ್ಲಿ ಲಭ್ಯವಿದೆ.  ‘ಡಿಜಿಟಲೀಕರಣಗೊಂಡ ಪುಸ್ತಕಗಳಲ್ಲಿ ಈಗಾಗಲೇ ಕೆಲ ಪುಸ್ತಕಗಳು ಸಾರ್ವಜನಿಕವಾಗಿ ಲಭ್ಯವಿವೆ. ಇನ್ನುಳಿದ ಕೃತಿಗಳನ್ನು ಡಿಜಿಟಲ್‌ ವೇದಿಕೆಯಲ್ಲಿ ಒದಗಿಸಲಾಗುವುದು. ಗಾಂಧಿ ಸಾಹಿತ್ಯವನ್ನು ಮುಕ್ತವಾಗಿ ಒದಗಿಸಬೇಕೆಂಬ ಉದ್ದೇಶದಿಂದ ಈ ಕಾರ್ಯವನ್ನು ಪ್ರಾರಂಭಿಸಲಾಯಿತು. ಬಳಿಕ ವಿವಿಧ ಪ್ರಕಾಶಕರು ಹಾಗೂ ಲೇಖಕರ ಕುಟಂಬದ ಸದಸ್ಯರು ಮರುಮುದ್ರಣ ಕಾಣದ ಪುಸ್ತಕಗಳನ್ನು ನೀಡಿದರು’ ಎಂದು ಓಂ ಶಿವಪ್ರಕಾಶ್ ವಿವರಿಸಿದರು.

https://archive.org/details/ServantsOfKnowledge https://vachana.sanchaya.net/  ಹಾಗೂ https://archive.org/details/JaiGyan ದಲ್ಲಿ ಡಿಜಿಟಲೀಕರಣಗೊಂಡ ಕೃತಿಗಳು ಲಭ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT