ಮಂಗಳವಾರ, ಅಕ್ಟೋಬರ್ 19, 2021
24 °C
ಸಚಿವ ಬಿ. ಶ್ರೀರಾಮುಲುಗೆ ಮನವಿ ಸಲ್ಲಿಸಿದ ಟಿ.ಎಸ್. ನಾಗಾಭರಣ

ಸಾರ್ವಜನಿಕ ಸಾರಿಗೆಗಳಲ್ಲಿ ಕನ್ನಡ ಬಳಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದಲ್ಲಿ ಸಂವಹನ ಮಾಡುವ ಅನುವಾದಸೂಚಿ, ಘೋಷಣೆಗಳು ಹಾಗೂ ಕನ್ನಡಪರ ಬರಹಗಳನ್ನು ಸಾರ್ವಜನಿಕ ಸಾರಿಗೆಗಳಲ್ಲಿ ಬಳಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಈ ಸಂಬಂಧ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮಂಗಳವಾರ ಮನವಿ ಪತ್ರವನ್ನು ಸಲ್ಲಿಸಿದರು. ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು ಮೂರು ದಿನಗಳ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.

‘ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ದೃಢೀಕರಣ, ರಶೀದಿಗಳು ಸೇರಿದಂತೆ ಇತರ ಪ್ರತಿಗಳಲ್ಲಿ ಕನ್ನಡಪರ ಹಾಗೂ ಕನ್ನಡ ಕಾಯಕ ವರ್ಷದ ಘೋಷಣೆಗಳು, ಬರಹಗಳನ್ನು ಮುದ್ರಿಸಬೇಕು. ಪ್ರಯಾಣಿಕರಿಗೆ ಕನ್ನಡದಲ್ಲಿ ಸಂವಹನ ಮಾಡುವ ಅನುವಾದ ಸೂಚಿ ಇರಬೇಕು. ಇದು ಅನ್ಯಭಾಷಿಗರಿಗೆ ಉಪಯುಕ್ತವಾಗಿರಬೇಕು. ವಾಹನಗಳಲ್ಲಿ ಕನ್ನಡ ಕಾಯಕ ವರ್ಷದ ಘೋಷ ವಾಕ್ಯಗಳಿರುವ ಫಲಕಗಳನ್ನು ಲಗತ್ತಿಸಬೇಕು’ ಎಂದು ನಾಗಾಭರಣ ತಿಳಿಸಿದರು.

‘ಇಲಾಖೆಗಳಲ್ಲಿನ ಜಾಲತಾಣ, ಸಾಮಾಜಿಕ ಮಾಧ್ಯಮಗಳ ಪುಟಗಳನ್ನು ಕನ್ನಡದಲ್ಲಿ ರೂಪಿಸಬೇಕು. ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಸೂಚನೆಗಳೆಲ್ಲವೂ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು. ಟಿಕೆಟ್, ಬಸ್ ಸೇರಿದಂತೆ ಕೆಲವೊಂದು ಪದಗಳನ್ನು ಹೊರತುಪಡಿಸಿ ಉಳಿದ ಪದಗಳು ಕನ್ನಡದಲ್ಲಿಯೇ ಇರಬೇಕು’ ಎಂದು ಒತ್ತಾಯಿಸಿದರು.

‘ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಅನುಷ್ಠಾನಕ್ಕೆ ಸರ್ವಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದ ಬಿ. ಶ್ರೀರಾಮುಲು, ‘ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಕನ್ನಡ ಅನುಷ್ಠಾನದ ವಿಷಯವನ್ನು ಪ್ರಮುಖವಾಗಿ ಚರ್ಚಿಸಲಾಗುವುದು’ ಎಂದರು.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು