ಭಾನುವಾರ, ಡಿಸೆಂಬರ್ 4, 2022
21 °C
ಜೆಎನ್‌ಯು ನಿವೃತ್ತ ಕನ್ನಡ ಪ್ರಾಧ್ಯಾಪಕ

ವಿಸ್ತಾರವಾಗದ ಕನ್ನಡದ ಓದುಗ ಪ್ರಪಂಚ: ಡಾ.ಪುರುಷೋತ್ತಮ ಬಿಳಿಮಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕನ್ನಡದ ಓದುಗರ ಪ್ರಪಂಚ ವಿಸ್ತಾರವಾಗಿಲ್ಲ ಹಾಗೂ ಗಂಭೀರವೂ ಆಗಿಲ್ಲ’ ಎಂದು ನವದೆಹಲಿಯ ಜೆಎನ್‌ಯು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ವಿಷಾದಿಸಿದರು.

ನಗರದ ಸಂಕಥನದಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಚ್‌.ಆರ್‌.ಸುಜಾತಾ ಅವರ ‘ಮಣಿಬಾಲೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಓದುಗರು ಮಾತ್ರವಲ್ಲ. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯಲ್ಲೂ ಈಚೆಗೆ ಕಡಿಮೆ ಆಗುತ್ತಿದೆ. ಅದೇ ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಶೇ 66ಕ್ಕೆ ಏರಿದೆ. ಕನ್ನಡದ ಬೆಳವಣಿಗೆ ಶೇ 3.75 ಮಾತ್ರ’ ಎಂದು ಆತಂಕ ವ್ಯಕ್ತಪಡಿಸಿದರು. ‌

‘ರಾಜ್ಯದಲ್ಲಿ 30 ಸಾವಿರ ಕನ್ನಡ ಅಧ್ಯಾಪಕರಿದ್ದರೂ ಈಚಿನ ದಿನಗಳಲ್ಲಿ ಕನ್ನಡ ಕವನ ಸಂಗ್ರಹ ಪುಸ್ತಕಗಳ ಮಾರಾಟ ಮೂರು ನೂರು ದಾಟುತ್ತಿಲ್ಲ’ ಎಂದು ಹೇಳಿದರು.

ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಎಂ.ಎಸ್.ಆಶಾದೇವಿ, ‘ಇತಿಹಾಸ ನೋಡುವ ದೃಷ್ಟಿಕೋನ ಬದಲಾದರೆ ಇತಿಹಾಸದ ವಿನ್ಯಾಸವೂ ಬದಲಾಗುತ್ತದೆ. ಅಡುಗೆಮನೆ ಲೋಕದಿಂದ ರಾಜಕಾರಣದ ಲೋಕಕ್ಕೆ ಕರೆತರುವ ಈ ಕೃತಿಯು ದಟ್ಟ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತದೆ. ಹೆಣ್ಣಿನ ಉತ್ಪಾದಕ ಶಕ್ತಿಯನ್ನು ಈ ಕೃತಿ ಹೊರಹಾಕುತ್ತದೆ’ ಎಂದರು.

ಪತ್ರಕರ್ತ ಜಿ.ಎನ್‌.ರಂಗನಾಥ ರಾವ್, ‘ಮಣಿಬಾಲೆ’ ಕೃತಿ ಗ್ರಾಮೀಣ ಸಂಸ್ಕೃತಿಯಲ್ಲಿ ವಿಶೇಷ ಪಯಣದ ಅನುಭವ ನೀಡುತ್ತದೆ ಎಂದರು.‌

ಲೇಖಕಿ ಎಚ್‌.ಆರ್‌.ಸುಜಾತಾ ಇದ್ದರು. ವಸುಂಧರಾ ಕದಲೂರು ನಿರೂಪಿಸಿದರು. ಎನ್‌.ಆರ್‌. ವಿಶುಕುಮಾರ್ ವಂದಿಸಿದರು. ಚಿಂತಾಮಣಿ ಜಿ.ಮುನಿರೆಡ್ಡಿ ತಂಡದವರಿಂದ ಜನಪದ ಗೀತಗಾಯನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು