ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಅಭಿಮಾನಿ ಹೆಸರಿನಲ್ಲಿ ನಕಲಿ ಖಾತೆ: ಮೂವರ ವಿರುದ್ಧ ಎಫ್‌ಐಆರ್

Published 7 ಮೇ 2023, 19:57 IST
Last Updated 7 ಮೇ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ಫೇಸ್‌ಬುಕ್‌ ಜಾಲತಾಣದಲ್ಲಿ ‘ಅಖಿಲ ಕರ್ನಾಟಕ ಯಡಿಯೂರಪ್ಪನವರ ಅಭಿಮಾನಿಗಳ ಬಳಗ’ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ಆರೋಪದಡಿ ಮೂವರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕಬ್ಬನ್‌ಪೇಟೆಯ ಸಿದ್ದು ಎಂಬುವವರು ದೂರು ನೀಡಿದ್ದಾರೆ. ಅನ್ವರ್ ಪಾಷಾ, ಶಾಹೀದ್, ಮೊಹಮ್ಮದ್ ಶರೀಫ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮೂವರೂ ಕಾರ್ಕಳದವರು ಎಂಬುದು ಗೊತ್ತಾಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಲವು ತಿಂಗಳ ಹಿಂದೆಯೇ ನಕಲಿ ಖಾತೆ ಸೃಷ್ಟಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಫೋಟೊ ಸಮೇತ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಯಡಿಯೂರಪ್ಪ ಅವರ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. ಲಿಂಗಾಯತ ಸಮುದಾಯದವರ ಬಗ್ಗೆಯೂ ಇಲ್ಲಸಲ್ಲದ ಅವಹೇಳನಕಾರಿ ಪೋಸ್ಟ್ ಅಪ್‌ಲೋಡ್ ಮಾಡಲಾಗಿದೆ. ಈ ಸಂಗತಿ ದೂರಿನಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

‘ಸಮಾಜದಲ್ಲಿ ದ್ವೇಷ ಭಾವನೆ ಸೃಷ್ಟಿಸಲು, ಶಾಂತಿಗೆ ಭಂಗ ಉಂಟುಮಾಡಲು ಆರೋಪಿಗಳು ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ದೂರುದಾರರು ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT