ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕರ್ತವ್ಯಲೋಪ ಆರೋಪ: ಡಿಸಿಪಿ ಸಹಿತ 6 ಅಧಿಕಾರಿಗಳ ಎತ್ತಂಗಡಿ

ಚುನಾವಣಾ ಕರ್ತವ್ಯಲೋಪ ಆರೋಪ l ಚುನಾವಣಾ ಆಯೋಗದಿಂದ ನಿರ್ದೇಶನ
Last Updated 18 ಏಪ್ರಿಲ್ 2023, 6:37 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಕರ್ತವ್ಯಲೋಪದ ಕಾರಣಕ್ಕೆ, ಬೆಂಗಳೂರು ಉತ್ತರ ಡಿಸಿಪಿ ದೇವರಾಜ್‌ ಸೇರಿದಂತೆ ಆರು ಪೊಲೀಸ್‌ ಅಧಿಕಾರಿಗಳ ಎತ್ತಂಗಡಿಗೆ ಭಾರತೀಯ ಚುನಾವಣಾ ಆಯೋಗ ಸೂಚಿಸಿದೆ. ಸುರಪುರ ಹಾಗೂ ದೇವದುರ್ಗ ಕ್ಷೇತ್ರಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿವೈಎಸ್‌ಪಿಗಳ ವರ್ಗಾವಣೆಗೂ ನಿರ್ದೇಶನ ನೀಡಿದೆ.

ಚುನಾವಣಾ ನೀತಿಸಂಹಿತೆ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಸುಗಮ ಚುನಾವಣೆ ನಡೆಸಲು 10 ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸೂಚಿಸಲಾಗಿದೆ ಎಂದು ಆಯೋಗದ ಹಿರಿಯ ಅಧಿಕಾರಿ
ಯೊಬ್ಬರು ತಿಳಿಸಿದರು.

ಬೆಂಗಳೂರು ಉತ್ತರ ಡಿಸಿಪಿ ದೇವರಾಜ್‌, ಯಶವಂತಪುರ ಎಸಿಪಿ ಅರುಣ್‌ ಗೌಡ, ರಾಜರಾಜೇಶ್ವರಿನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗೂ ರಾಜಗೋಪಾಲನಗರ ಠಾಣೆಗಳ ಇನ್‌ಸ್ಪೆಕ್ಟರ್‌ಗಳಾದ ಶಿವಣ್ಣ, ಸುರೇಶ್‌ ಕೆ., ಮಂಜುನಾಥ್‌ ಮತ್ತು ಜಗದೀಶ್‌ ವರ್ಗಾವಣೆಗೊಳ್ಳಲಿದ್ದಾರೆ. ಸಚಿವರೊಬ್ಬರ ಶಿಫಾರಸಿನ ಮೇರೆಗೆ ಈ ಪೊಲೀಸ್‌ ಅಧಿಕಾರಿಗಳನ್ನು ಈ ಠಾಣೆಗಳಿಗೆ ನೇಮಕ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಕೋಮು ದ್ವೇಷದ ಭಾಷಣ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ತೋಟಗಾರಿಕಾ ಸಚಿವ ಎಸ್‌. ಮುನಿರತ್ನ ವಿರುದ್ಧ ಇತ್ತೀಚೆಗೆ ಎಫ್‌ಐಆರ್‌ಗಳು ದಾಖಲಾಗಿದ್ದವು.

‘ತಮಿಳು ಭಾಷಿಕರು ಮತ್ತು ಕನ್ನಡಿಗರ ಮಧ್ಯೆ ಸಂಘರ್ಷಕ್ಕೆ ಎಡೆಮಾಡುವಂಥ ಪ್ರಚೋದನಕಾರಿ ಭಾಷಣ ಮಾಡಿರುವ ಮುನಿರತ್ನ, ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದು ಓಡಿಸಿ ಎಂಬುದಾಗಿ ಮಾತನಾಡಿದ್ದಾರೆ. ಕೋಮು ದ್ವೇಷದ ಹೇಳಿಕೆ ನೀಡಿ ಸಮುದಾಯದ ಗೌರವ ಹಾಗೂ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ’ ಎಂಬುದಾಗಿ ದೂರುದಾರರು ಆರೋಪಿಸಿದ್ದರು. ಮುನಿರತ್ನ ಅವರ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಈ ತಿಂಗಳ ಆರಂಭದಲ್ಲಿ, ಸುರಪುರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿತ್ತು. ಈ ಗಲಾಟೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಅಲ್ಲಿನ ಡಿಸಿಪಿ ಮಂಜುನಾಥ್‌, ಇನ್‌ಸ್ಪೆಕ್ಟರ್‌ ಆನಂದ್‌ ವಾಗಮೋಡೆ ಅವರನ್ನು ವರ್ಗಾಯಿಸಲಾಗುತ್ತಿದೆ. ದೇವದುರ್ಗದ ಗಲಾಟೆಗೆ ಸಂಬಂಧಿಸಿದಂತೆ ಅಲ್ಲಿನ ಡಿಸಿಪಿ ಮಂಜುನಾಥ್‌ ಎಸ್‌. ಹಾಗೂ ಇ‌ನ್‌ಸ್ಪೆಕ್ಟರ್‌ ಖ್ವಾಜಾ ಹುಸೇನ್‌ ಅವರನ್ನು ವರ್ಗಾಯಿಸಲಾಗುತ್ತಿದೆ ಎಂದು ಆಯೋಗದ ಅಧಿಕಾರಿಯೊ ಬ್ಬರು ತಿಳಿಸಿದರು.

‘ಈ ಬಗ್ಗೆ ಆಯೋಗಕ್ಕೆ ಯಾವುದೇ ದೂರುಗಳು ಬಂದಿರಲಿಲ್ಲ. ಸುಲಲಿತ ವಾಗಿ ಚುನಾವಣೆ ನಡೆಸುವ ಉದ್ದೇಶ ದಿಂದ ಆಯೋಗ ಸ್ವಯಂಪ್ರೇರಿತವಾಗಿ ಈ ಕ್ರಮ ಕೈಗೊಂಡಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT