ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಎಸ್‌ಐಟಿ

2019-20 ರಿಂದ 2022-23ರವರೆಗೆ ಕಾಮಗಾರಿಗಳ ಪರಿಶೀಲನಾ ವರದಿಗೆ 30 ದಿನದ ಗಡುವು
Published 7 ಆಗಸ್ಟ್ 2023, 14:38 IST
Last Updated 7 ಆಗಸ್ಟ್ 2023, 14:38 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2022-23ರವರೆಗೆ ನಡೆದಿರುವ ಕಾಮಗಾರಿಗಳ ಬಗ್ಗೆ ವಿವರವಾದ ತನಿಖೆ ನಡೆಸಲು ಸರ್ಕಾರ ನಾಲ್ಕು ತನಿಖಾ ಸಮಿತಿಗಳನ್ನು ರಚಿಸಿದೆ.

ನಾಲ್ವರು ಐಎಎಸ್ ಅಧಿಕಾರಿಗಳ ನೇತೃತ್ವದ ತನಿಖಾ ಸಮಿತಿಗಳಲ್ಲಿ ಲೋಕೋಪಯೋಗಿ ಇಲಾಖೆ, ಕೆಪಿಟಿಸಿಎಲ್, ಎನ್‌ಎಚ್‌ಎಐ ನಿವೃತ್ತ ಎಂಜಿನಿಯರ್‌ಗಳು ಸದಸ್ಯರಾಗಿದ್ದಾರೆ. ಆ.5 ರಂದು ತನಿಖಾ ಸಮಿತಿಗಳನ್ನು ರಚಿಸಲಾಗಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಒಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ, ಕೇಂದ್ರ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರು, ಸ್ವಾಧೀನಾನುಭವ ಪತ್ರ ನೀಡಿಕೆ, ಕೆರೆ ಅಭಿವೃದ್ಧಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳು, ವಾರ್ಡ್ ಮಟ್ಟದ ಕಾಮಗಾರಿಗಳ ಬಗ್ಗೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ದೂರು ಪ್ರಕರಣಗಳಲ್ಲಿ ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆ ಮಾಡಬೇಕು. ಆರೋಪಿತರ ಸ್ಪಷ್ಟ ಗುರುತಿಸುವಿಕೆ ಸಹಿತ ಪೂರ್ಣ ವರದಿಯನ್ನು ಸರಿಯಾದ ಶಿಫಾರಸಿನೊಂದಿಗೆ ಸಲ್ಲಿಸಲು ಆದೇಶಿಸಲಾಗಿದೆ.

‘ಬಿಬಿಎಂಪಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ನಾಗರಿಕರು, ಜನಪ್ರತಿನಿಧಿಗಳು, ಮಾಧ್ಯಮಗಳು, ಗುತ್ತಿಗೆದಾರರ ಸಂಘಗಳಿಂದ ಸಾಕಷ್ಟು ದೂರುಗಳು ಬಂದಿವೆ. ಕಾಮಗಾರಿಗಳನ್ನು ನಡೆಸದೆ ಬಿಲ್ ಪಾವತಿ, ಟೆಂಡರ್ ನೀಡುವಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿರುವುದು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡದಿರುವುದು, ಅನುಮೋದಿತ ಕಾಮಗಾರಿಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸದಿರುವ ದೂರುಗಳು ಬಂದಿವೆ. ರಾಜ್ಯ, ಕೇಂದ್ರ, ಬಿಬಿಎಂಪಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸುವ ಆಗತ್ಯವಿದ್ದು, ಇದಕ್ಕೆ ತಜ್ಞರ ತನಿಖಾ ಸಮಿತಿ ರಚಿಸಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರಿದ್ದರು. ಅದರಂತೆ ತನಿಖಾ ಸಮಿತಿಗಳನ್ನು ರಚಿಸಲಾಗಿದೆ.

ತನಿಖಾ ಅಂಶಗಳು:

* ಕಾಮಗಾರಿಗಳಿಗೆ ಶಾಸನಾಬದ್ಧ ಅನುಮತಿಗಳ ಪರಿಶೀಲನೆ, ಟೆಂಡರ್‌ಗಳಲ್ಲಿ ಮೌಲ್ಯಮಾಪನ, ಅನರ್ಹರಿಗೆ ಟೆಂಡರ್ ನೀಡಿರುವುದು, ಪ್ರಮಾಣ ಪತ್ರಗಳ ಪರಿಶೀಲನೆ, ಗುತ್ತಿಗೆದಾರರ ವಾರ್ಷಿಕ ವಹಿವಾಟು, ಪೂರ್ವಾನುಭವ ಪ್ರಮಾಣ ಪತ್ರ ಪರಿಶೀಲನೆ.

* ನಿರ್ದಿಷ್ಟ ಗುತ್ತಿಗೆದಾರ ಹೆಸರಿನಲ್ಲಿ ಕಾರ್ಯಾದೇಶ ನೀಡಿದ್ದು, ಹಣ ಬೇರೆಯವರಿಗೆ ಪಾವತಿ, ಟೆಂಡರ್ ಕರೆಯದೆ ಹಿಂದಿನ ಕಾರ್ಯಾದೇಶ ವಿಸ್ತರಣೆ, ಕಾಮಗಾರಿಗಳಿಗೆ ಅನಗತ್ಯ ಮರುವೆಚ್ಚ, ಕಟ್ಟಡಗಳಿಗೆ ನಕ್ಷೆ, ಸ್ವಾಧೀನಾನುಭವ ಪತ್ರ ನೀಡಿಕೆಯಲ್ಲಿ ಪಾಲಿಕೆಗೆ ಆಗಿರುವ ಆರ್ಥಿಕ ನಷ್ಟಗಳ ವಿವರಣೆ.

* ಅನುಮತಿ ಪಡೆಯದೆ ಒಎಫ್‌ಸಿ ಕೇಬಲ್‌ಗಳ ಅಳವಡಿಕೆ, ಹೆಚ್ಚುವರಿ ಅಳವಡಿಕೆಗೆ ಕಡಿಮೆ ಲೆಕ್ಕ, ಅನಧಿಕೃತ ಅಳವಡಿಕೆ, ಆರ್ಥಿಕ ನಷ್ಟ, ಯೋಜನೆಗಳ ಗುಣಮಟ್ಟ, ವಾಸ್ತವ ಕಾರ್ಯಾದೇಶ, ಮೂಲ ಅಂದಾಜು ವೆಚ್ಚ ಹೆಚ್ಚಳ, ಅನುಷ್ಠಾನದಲ್ಲಿ ಲೋಪ-ದೋಷ ಪರಿಶೀಲನೆ, ಕಾಮಗಾರಿಗೆ ಮುನ್ನ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ ಆಗಿದೆಯೇ, ಅದಕ್ಕೆ ಸಂಬಂಧಿಸಿದಂತೆ ಏಜೆನ್ಸಿ ನೀಡಿರುವ ವರದಿಗಳನ್ನು ಪರಿಶೀಲನೆ ಮಾಡುವುದು.

* ಆಯಾ ವಿಭಾಗಗಳ ಅಧಿಕಾರಿಗಳು ತನಿಖಾ ಸಮಿತಿಗೆ ಅಗತ್ಯ ಮಾಹಿತಿ ಒದಗಿಸಬೇಕು. ವಾಹನ, ಭತ್ಯೆ, ಕಚೇರಿ, ಅಗತ್ಯ ಉಪಕರಣಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಗುಣಮಟ್ಟ ಪರೀಕ್ಷೆಗೆ ಮೂರನೇ ಸ್ವತಂತ್ರ ಏಜೆನ್ಸಿಯನ್ನು ಆಯಾ ಸಮಿತಿಗಳ ಅಧ್ಯಕ್ಷರ ಅನುಮತಿ ಮೇರೆಗೆ ನಿಯೋಜಿಸಿಕೊಳ್ಳಬಹುದು ಎಂದು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT