ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆರವಿಗೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ

₹ 33 ಕೋಟಿ ಬಾಕಿ: ಸದ್ಯ ₹ 2 ಕೋಟಿ ಪಾವತಿಗೆ ನಿರ್ದೇಶನ
Published : 10 ಡಿಸೆಂಬರ್ 2021, 15:54 IST
ಫಾಲೋ ಮಾಡಿ
Comments

ಬೆಂಗಳೂರು: ತೆರಿಗೆ ಪಾವತಿಸದ ಕಾರಣ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಆದೇಶಿಸಿದೆ.

‘ಬೀಗ ತೆರವುಗೊಳಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿಮಂತ್ರಿ ಮಾಲ್‌ ಆಡಳಿತ ಮಂಡಳಿಯ ಮೆಸರ್ಸ್‌ ಅಭಿಷೇಕ್‌ ಪ್ರೊಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಮೆಸರ್ಸ್‌ ಹಮಾರಾ ಶೆಲ್ಟರ್ಸ್‌ ಪ್ರವೇಟ್‌ ಲಿಮಿಟೆಡ್‌ ಕಂಪನಿಸಲ್ಲಿಸಿದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಸಂಜೆ ಕಲಾಪದ ಅವಧಿ ಮೀರಿದ ನಂತರದಲ್ಲಿ ವಿಚಾರಣೆ ನಡೆಸಿತು.

‘ಶುಕ್ರವಾರ ಮಧ್ಯರಾತ್ರಿ 12 ಗಂಟೆ ಒಳಗೆ ಆರ್‌ಟಿಜಿಎಸ್ ಮೂಲಕ ₹ 2 ಕೋಟಿಯನ್ನು ಬಿಬಿಎಂಪಿ ಖಾತೆಗೆ ಪಾವತಿಸಬೇಕು. ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಭದ್ರತೆಗಾಗಿ ₹ 4 ಕೋಟಿ ಚೆಕ್‌ ಕೊಟ್ಟು, ಸೋಮವಾರ ಮಧ್ಯಾಹ್ನ 12 ಗಂಟೆ ಒಳಗೆ ₹ 2 ಕೋಟಿ ಪಾವತಿಸಿ ₹ 4 ಕೋಟಿ ಚೆಕ್‌ ವಾಪಸು ಪಡೆಯಬಹುದು’ ಎಂದು ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ಅಂತೆಯೇ, ‘ಅರ್ಜಿದಾರರು ಎಷ್ಟು ವರ್ಷಗಳಿಂದ, ಎಷ್ಟು ಬಾಕಿ ಹಣ ಉಳಿಸಿಕೊಂಡಿದ್ದಾರೆ ಮತ್ತು ಈ ಬಾಕಿ ಹಣ ಪಾವತಿಗಾಗಿ ಬಿಬಿಎಂಪಿ ಅವರಿಗೆ ಮಂತ್ರಿಮಾಲ್‌ ಆಡಳಿತ ಮಂಡಳಿಗೆ ತಿಳಿಸಿರುವ ಕುರಿತ ಸಮರ್ಪಕ ದಾಖಲೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು. ಒಂದು ವೇಳೆ ಈ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮಧ್ಯಂತರ ಆದೇಶವನ್ನು ರದ್ದುಗೊಳಿಸಲಾಗುವುದು’ ಎಂದು ನ್ಯಾಯಪೀಠ ಮಂತ್ರಿಮಾಲ್‌ ಆಡಳಿತ ಮಂಡಳಿಗೆ ಎಚ್ಚರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಎಸ್.ಶ್ಯಾಮಸುಂದರ್‌, ‘ಬಿಬಿಎಂಪಿ ಬೀಗ ಹಾಕುವ ಬಗ್ಗೆ ನಮಗೆ ಮುಂಚಿತವಾಗಿಯೇ ನೋಟಿಸ್‌ ನೀಡಿಲ್ಲ. ಕೋವಿಡ್‌ ಕಾರಣದಿಂದ ಸಕಾಲದಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಮಾಲ್‌ಗೆ ಬೀಗ ಹಾಕಿರುವುದರಿಂದ ನೌಕರರು ಸಂಬಳವಿಲ್ಲದೆ ಪರದಾಡುವಂತಾಗಿದೆ. ಒಳಗಿರುವ ಒಂದೂವರೆ ಕೋಟಿ ಮೌಲ್ಯದ ವಸ್ತುಗಳು ಎರಡು ದಿನಗಳಲ್ಲೇ ನಾಶವಾಗುವ ಆತಂಕವಿದೆ. ಸದ್ಯ ಒಂದು ಕೋಟಿ ರೂಪಾಯಿ ಪಾವತಿಸುತ್ತೇವೆ. ಉಳಿದ ತೆರಿಗೆಯನ್ನು ಹಂತಹಂತವಾಗಿ ಚುಕ್ತಾ ಮಾಡುತ್ತೇವೆ. ಆದ್ದರಿಂದ, ಇವತ್ತೇ ಬೀಗ ತೆರೆಯುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಪರ ವಕೀಲ ಬಿ.ಎಸ್.ಕಾರ್ತಿಕೇಯನ್‌, ‘ಅರ್ಜಿದಾರರು ಕೋವಿಡ್‌ ನೆಪ ಹೇಳುತ್ತಿರುವುದು ಸರಿಯಲ್ಲ. ನಾಲ್ಕು ವರ್ಷಗಳಿಂದ ಮಂತ್ರಿ ಮಾಲ್‌ ₹ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು ಇದೇ 5ರಂದು ಸಂಪೂರ್ಣ ಚುಕ್ತಾ ಮಾಡುವುದಾಗಿ ಈ ವರ್ಷದ ಆರಂಭದಲ್ಲಿ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಆಡಳಿತ ಮಂಡಳಿ ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ’ ಎಂದು ಬಲವಾಗಿ ಆಕ್ಷೇಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT