ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಸ್ಥರು ಮೃತಪಟ್ಟರೆ ಮಾತ್ರ ರಜೆ: ಆಕ್ರೋಶಕ್ಕೆ ಕಾರಣವಾದ ಡಿಸಿಪಿ ಬಾಬಾ ಆದೇಶ

Last Updated 2 ನವೆಂಬರ್ 2022, 14:27 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳಿಗೆ ರಜೆ ನೀಡುವ ವಿಚಾರದಲ್ಲಿ ಆಗ್ನೇಯ ವಿಭಾಗದ ಡಿ.ಸಿ.ಪಿ ಅವರು ಅ.28ರಂದು ಹೊರಡಿಸಿರುವ ಆದೇಶವು ವಿವಾದಕ್ಕೆ ಕಾರಣವಾಗಿದೆ.

ಪೊಲೀಸರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಡಿಸಿಪಿ ಸಿ.ಕೆ.ಬಾಬಾಅವರು ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ.

‘ಜ್ಞಾಪನಾ ಪತ್ರವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೋರಿಕೆಗೆ ತಕ್ಕಂತೆ ರಜೆ ನೀಡಲಾಗುತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದೇಶದಲ್ಲಿ ಏನಿತ್ತು?:‘ಆಗ್ನೇಯ ವಿಭಾಗದ ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ನಿಂದ ಇನ್‌ಸ್ಪೆಕ್ಟರ್‌ ಹುದ್ದೆಯ ತನಕ ಬೇರೆ ಬೇರೆ ಕಾರಣಕ್ಕೆ ರಜೆ ಮೇಲೆ ತೆರಳುತ್ತಿದ್ದಾರೆ. ಠಾಣೆ ಹಾಗೂ ಕಚೇರಿ ಕರ್ತವ್ಯಕ್ಕೆ ತೊಂದರೆ ಆಗುತ್ತಿರುವ ಕಾರಣದಿಂದ ಇನ್ನು ಮುಂದೆ ಯಾವುದೇ ಠಾಣೆಯ ಅಧಿಕಾರಿ, ಸಿಬ್ಬಂದಿ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರೆ ಹಾಗೂ ಮನೆಗಳಲ್ಲಿ ಯಾರಾದರೂ ಮೃತಪಟ್ಟಲ್ಲಿ ಮಾತ್ರ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ. ಪದೇ ಪದೇ ಯಾವುದೇ ಸಕಾರಣವಿಲ್ಲದೇ ರಜೆಯ ಮೇಲೆ ತೆರಳಿದಲ್ಲಿ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಠಾಣೆಯ ಠಾಣಾಧಿಕಾರಿಗಳು ಹಾಗೂ ಎಸಿ‍ಪಿ ಅವರು ಮೇಲಿನ ಕಾರಣ ಹೊರತುಪಡಿಸಿ ಬೇರೆ ರಜೆಗೆ ಶಿಫಾರಸು ಮಾಡದಂತೆ ಸೂಚಿಸಲಾಗಿದೆ. ಕಚೇರಿಗೆ ಬಂದು ರಜೆಯ ಶಿಫಾರಸು ಮಾಡಿದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರಜೆ ಬೇಕಾದವರು ಡಿ.ಸಿ.ಪಿ ಅವರಿಂದ ರಜೆ ಮಂಜೂರು ಮಾಡಿಸಿಕೊಂಡೇ ಹೋಗಬೇಕು’ ಎಂಬ ಆದೇಶಕ್ಕೆ ಪೊಲೀಸ್ ಸಿಬ್ಬಂದಿಯಿಂದ ಆಕ್ರೋಶ ವ್ಯಕ್ತವಾಗಿದೆ.

‘ಸದಾ ನಾವು ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ರಜೆ ನೀಡದಿದ್ದರೆ ಹೇಗೆ? ಡಿಸಿಪಿ ಆದೇಶವು ಸರಿಯಲ್ಲ’ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರು ಆಕ್ರೋಶ ಹೊರಹಾಕಿದ್ಧಾರೆ.

ಆಕ್ರೋಶ ಹೆಚ್ಚಾದ ಮೇಲೆ ಸ್ಪಷ್ಟನೆ ನೀಡಿರುವ ಡಿಸಿಪಿ ಬಾಬಾ ಅವರು, ‘28ರ ಆದೇಶ ಕೆಲವರು ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಂಡಿದ್ದರಿಂದ ಗೊಂದಲ ಉಂಟಾಗಿದೆ. ಕರ್ನಾಟಕ ರಾಜ್ಯೋತ್ಸವ, ಸೂಕ್ಷ್ಮ ಬಂದೋಬಸ್ತ್ ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ದೃಷ್ಟಿಯಿಂದ ಜ್ಞಾಪನಾ ಪತ್ರ ನೀಡಲಾಗಿತ್ತು. ಅಧಿಕಾರಿಗಳು ಸಕಾರಣವಿಲ್ಲದೆ ದೀರ್ಘಕಾಲಿಕ ರಜೆಯ ಮೇಲೆ ತೆರಳುವುದನ್ನು ತಾತ್ಕಾಲಿಕವಾಗಿ ಮುಂದೂಡುವ ಉದ್ದೇಶ ಹಾಗೂ ಕಚೇರಿಯ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಅಧಿಕಾರಿಗಳಿಗೆ ಮಾತ್ರ ಈ ಪತ್ರ ನೀಡಲಾಗಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT