ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ಬದಲಿಸದೇ ಅದರ ಭಾಗವಾದೆವು: ಬಿ.ಆರ್.ಪಾಟೀಲ ಬೇಸರ

ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಿ.ಆರ್.ಪಾಟೀಲ ಅಭಿಮತ
Published 23 ಮಾರ್ಚ್ 2024, 14:20 IST
Last Updated 23 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯವಸ್ಥೆಯನ್ನು ಬದಲಿಸಲು ನಾವು ರಾಜಕೀಯಕ್ಕೆ ಬಂದಿದ್ದೆವು. ಆದರೆ, ಅದರಲ್ಲಿ ವಿಫಲವಾಗಿ ಅದರ ಭಾಗವಾಗಿರುವುದು ದುರಂತ’ ಎಂದು ಮುಖ್ಯಮಂತ್ರಿಯವರ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ಬೇಸರ ವ್ಯಕ್ತಪಡಿಸಿದರು.

ಭಾರತ ಯಾತ್ರಾ ಕೇಂದ್ರ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌, ಲೋಕನಾಯಕ ಜಯಪ್ರಕಾಶ ನಾರಾಯಣ ವಿಚಾರ ವೇದಿಕೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಡಾ.ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಹಾಗೂ ಡಾ. ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಂತರಿಕ ಪ್ರಜಾಪ್ರಭುತ್ವಕ್ಕೆ ಸಮಾಜವಾದ ಒತ್ತು ನೀಡಿದೆ. ಇಂದಿನ ಯಾವುದಾದರೂ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯೇ? ನಾವು ಆಯಾ ಪಕ್ಷಗಳಲ್ಲಿ ಗುಲಾಮರಂತೆ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಜಾತಿ ಮತ್ತು ವರ್ಗಗಳ ಮಧ್ಯೆ ಸಮಾನಾಂತರ ಸಂಘರ್ಷ ನಡೆದರೆ ಸಮಾಜವಾದ ಬರುತ್ತದೆ ಎಂದು ಲೋಹಿಯಾ ಹೇಳಿದ್ದರು. ಅವರ ದೃಷ್ಟಿಕೋನ ವಿಶಾಲವಾಗಿತ್ತು. ಇಂದು ಶಾಸನಸಭೆಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಧ್ವನಿ ಎತ್ತುವವರ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು.

‘ಬ್ರಾಹ್ಮಣರು, ಲಿಂಗಾಯತರು ಸೇರಿ ಎಲ್ಲರೂ ಮೀಸಲಾತಿ ಸೌಲಭ್ಯ ಕೇಳುತ್ತಿದ್ದಾರೆ. ಮೀಸಲಾತಿ ಎಂಬ ಭ್ರಮೆಯಲ್ಲಿ ನಾವು ಮುಳುಗಿದ್ದೇವೆ. ಇದರಿಂದ, ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ಸಮಾನ ಅವಕಾಶಗಳು ಪಡೆದುಕೊಳ್ಳಬಹುದು. ಆದರೆ, ಮೀಸಲಾತಿಯಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂಬುದು ಭ್ರಮೆ’ ಎಂದರು.

‘ಸಮಾಜವಾದಿಗಳು ಇಂದು ಭಿನ್ನ ಪಕ್ಷದಲ್ಲಿದ್ದರೂ ತತ್ವ–ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ರೈತ, ದಲಿತ, ಮಹಿಳಾ ಚಳವಳಿಗಳನ್ನು ಸಮಾಜವಾದದ ನೆಲೆಯಲ್ಲಿ ಗಟ್ಟಿಗೊಳಿಸುವ ಕೆಲಸ ಮಾಡಬೇಕು’ ಎಂದರು.

ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಅವರಿಗೆ ಡಾ.ರಾಮಮನೋಹರ್ ಲೋಹಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಸಂಚಾಲಕ ಮಾವಳ್ಳಿ ಶಂಕರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ, ಲೇಖಕಿ ವಿಜಯಾ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ಸುಮಾ ವಿಜಯ್, ಲೋಕನಾಯಕ ಜಯಪ್ರಕಾಶ ನಾರಾಯಣ ವಿಚಾರ ವೇದಿಕೆಯ ಕೆ.ವಿ.ನಾಗರಾಜ ಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT