ಶನಿವಾರ, ಮಾರ್ಚ್ 28, 2020
19 °C
ಯೋಜನೆಯನ್ನು ಕೈಬಿಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿ

ಅಕಾಡೆಮಿ ‘ಚಕೋರ’ಕ್ಕೆ ಗ್ರಹಣ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಿಂದಿನ ಕಾರ್ಯಕಾರಿ ಸಮಿತಿ ಜಾರಿಗೆ ತಂದಿದ್ದ ‘ಚಕೋರ’ ಯೋಜನೆಯನ್ನು ಈಗಿನ ಕಾರ್ಯಕಾರಿ ಸಮಿತಿ ಸ್ಥಗಿತಗೊಳಿಸಿದೆ. 

ರಾಜ್ಯದ 30 ಜಿಲ್ಲೆಗಳಲ್ಲಿಯೂ ಸಾಹಿತ್ಯ ಕೃಷಿ ಕೈಗೊಂಡು, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾಡಿನ ಜನರನ್ನು ತಲುಪುವುದು ಯೋಜನೆಯ ಉದ್ದೇಶವಾಗಿತ್ತು. ಜಿಲ್ಲೆಗಳಲ್ಲಿ 30 ಸಾಹಿತಿಗಳನ್ನು ಒಳಗೊಂಡ ವೇದಿಕೆಗಳನ್ನು ರಚಿಸಿ, ಪ್ರತಿ ತಿಂಗಳು ಸಾಹಿತ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಇದನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲೆಗೆ ಇಬ್ಬರು ಪ್ರತಿನಿಧಿಗಳನ್ನು ನೇಮಿಸ
ಲಾಗಿತ್ತು. ಪ್ರತ್ಯೇಕ ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ ಬುಕ್‌ ಪುಟ ಹಾಗೂ ಯೂಟ್ಯೂಬ್‌ ಚಾನಲ್ ಪ್ರಾರಂಭಿಸಿ, ಅಲ್ಲಿಯೂ ಸಾಹಿತ್ಯಿಕ ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಕವಿಗೋಷ್ಠಿ ನಡೆಸಿ, ಅದನ್ನು ನೇರಪ್ರಸಾರ ಮಾಡಲಾಗಿತ್ತು.

ಯೋಜನೆಯಡಿ ಪ್ರತಿ ತಿಂಗಳು ಕನಿಷ್ಠ ಒಂದು ಕಾರ್ಯಕ್ರಮ ಮಾಡಿ, ಅದನ್ನು ವಿಡಿಯೊ ಚಿತ್ರೀಕರಿಸಬೇಕಿತ್ತು. ಅಕಾಡೆಮಿಯ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ವಿಡಿಯೊ ಕಳಿಸಿ, ಕಾರ್ಯಕ್ರಮದ ಮಾಹಿತಿಯನ್ನು ಒದಗಿಸಿದಲ್ಲಿ ಅಗತ್ಯ ಧನಸಹಾಯವನ್ನೂ ಮಾಡಲಾಗುತ್ತಿತ್ತು. 27 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈಗಿನ ಕಾರ್ಯಕಾರಿ ಸಮಿತಿಯು ಈ ಯೋಜನೆಯನ್ನು ಕೈಬಿಟ್ಟಿದೆ. ಪ್ರಕಟಣೆಗೆ ಸಂಬಂಧಿಸಿದ ‘ಬಂಗಾರದ ಎಲೆಗಳು’ ಹಾಗೂ ‘ವಜ್ರದ ಬೇರುಗಳು’ ಯೋಜನೆಗಳನ್ನು ಮುಂದುವರಿಸಿದೆ. 

‘ಚಕೋರ ಯೋಜನೆಯನ್ನು ಸ್ಥಗಿತಗೊಳಿಸಿದ್ದೇವೆ. ಉಳಿದ ಯೋಜನೆಯನ್ನು ಮುಂದುವರಿಸಲಾಗುವುದು. ಅನು
ದಾನದ ಕೊರತೆ ಇರಲಿಲ್ಲ. ಆದರೆ, ನಾವು ಕೂಡ ಹೊಸ ಯೋಜನೆಯನ್ನು ಪ್ರಾರಂಭಿಸಬೇಕಾಗುತ್ತದೆ. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ  ಆಸಕ್ತಿ ಹೆಚ್ಚಿಸಲು ‘ಹದಿಹರೆಯದ ಸಾಹಿತ್ಯ ಸುಧೆ’ ಯೋಜನೆ ಪ್ರಾರಂಭಿಸಿದ್ದೇವೆ. ‘ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಮಾಲೆ’, ‘ದೇಶಿ ದರ್ಶನ ಮಾಲೆ’ ಹಾಗೂ ‘ಪಾರಿಭಾಷಿಕ ಪದಕೋಶ ಮಾಲೆ’ ಯೋಜನೆಗಳನ್ನೂ ಕೈಗೆತ್ತಿಕೊಂಡಿದ್ದೇವೆ’ ಎಂದು ಅಕಾಡೆಮಿಯ ಅಧ್ಯಕ್ಷ ಬಿ.ವಿ. ವಸಂತಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಅಕಾಡೆಮಿ ಕೈಬಿಡಬಾರದು: ನಿಕಟಪೂರ್ವ ಅಧ್ಯಕ್ಷ ಅರವಿಂದ ಮಾಲಗತ್ತಿ, ‘ತಂತ್ರಜ್ಞಾನದ ನೆರವಿನೊಂದಿಗೆ ಸಾಹಿತ್ಯ ಚಟುವಟಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ‘ಚಕೋರ’ ಯೋಜನೆ ಪ್ರಾರಂಭಿಸಿದ್ದೇವು. ಸದ್ಯದ
ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಒಡನಾಟಹೊಂದದಿದ್ದರೆ ಸಾಹಿತ್ಯಕ್ಕೆ ಬದುಕಿಲ್ಲ. ಜನಸಾಮಾನ್ಯ
ರಲ್ಲೂ ಸಾಹಿತ್ಯಾಸಕ್ತಿಯನ್ನು ಬೆಳೆಸಲು ಈ ಯೋಜನೆ ಸಹಾಯಕವಾಯಿತು. ನಮ್ಮ ಮಾದರಿಯನ್ನು ಉಳಿದ ಖಾಸಗಿ ಸಾಹಿತ್ಯಿಕ ಸಂಸ್ಥೆಗಳೂ ಅನುಕರಿಸಿದ್ದವು ಇಂತಹ ಯೋಜನೆಯನ್ನು ಅಕಾಡೆಮಿ ಕೈಬಿಡಬಾರದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು