ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಗತವೈಭವ ಸ್ಥಾಪಿಸಲು ಯತ್ನಿಸುವೆ: ಎಚ್‌.ಕೆ. ಪಾಟೀಲ

ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕ
Last Updated 12 ಸೆಪ್ಟೆಂಬರ್ 2020, 9:14 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರದ ಉಸ್ತುವಾರಿ ನೀಡಿದ್ದಾರೆ. ಮಹಾರಾಷ್ಟ್ರ ರಾಜಕೀಯವಾಗಿ ದೇಶದಲ್ಲೇ ಮಹತ್ವದ ರಾಜ್ಯ. ಸಾಕಷ್ಟು ಸವಾಲುಗಳಿರುವ ಅಲ್ಲಿ, ಪಕ್ಷದ ಗತವೈಭವ ಸ್ಥಾಪಿಸಲು ಯತ್ನಿಸುವೆ’ ಎಂದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕಗೊಂಡ ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದರು.

‘ಪಕ್ಷ ಗಟ್ಟಿಗೊಳಿಸಲು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನ ನನಗಿದೆ. ವೇಣುಗೋಪಾಲ್ ಅವರಿಗೂ‌ ನನ್ನ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ವೀರಪ್ಪ ಮೊಯಿಲಿ ಮೊದಲು ನನ್ನನ್ನು ಮಂತ್ರಿ ಮಾಡಿದರು. ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡಿದ್ದೆ. ಧರಂ ಸಿಂಗ್ ಅವಧಿಯಲ್ಲಿ ಕಾನೂನು ಮಂತ್ರಿ, ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಹೊಸ ಜವಾಬ್ದಾರಿ ಸಿಕ್ಕಿದೆ’ ಎಂದರು.

ಅಧಿವೇಶನದಲ್ಲಿ ಪ್ರಸ್ತಾವ: ಡ್ರಗ್ ಜಾಲದಲ್ಲಿ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸಮರ್ಥಿಸಿಕೊಂಡ ಎಚ್.ಕೆ. ಪಾಟೀಲ, ‘ಜಮೀರ್ ಅಹ್ಮದ್ ಖಾನ್, ತಮ್ಮ ವಿರುದ್ಧದ ಆರೋಪ ಸಾಬೀತಾದರೆ ಪೂರ್ತಿ ಆಸ್ತಿಯನ್ನೇ ಸರ್ಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಡ್ರಗ್ ಜಾಲದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.

‘ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ಗೆ ಬಂದವನು. ಈಗಾಗಲೇ ಹಲವು ಸ್ಥಾನಮಾನಗಳನ್ನು ಪಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಮಹಾರಾಷ್ಟ್ರದ ಉಸ್ತುವಾರಿಯಾಗಿದ್ದರು. ಅವರ ಮಾರ್ಗದರ್ಶನ ನನಗೆ ಸಿಗಲಿದೆ’ ಎಂದರು.

ಸರ್ಕಾರ ವಾಸ್ತವ ತಿಳಿಸಲಿ: ‘ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣದ ಬಗ್ಗೆ ಸರ್ಕಾರ ವಾಸ್ತವ ತಿಳಿಸಬೇಕು. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದ್ದೇ ಹೆಚ್ಚಿದೆ. ರಾಜ್ಯ ಸರ್ಕಾರದ ಅಂಕಿ ಸಂಖ್ಯೆಗಳು ಕುತೂಹಲ ಮೂಡಿಸುತ್ತದೆ. ಶ್ವಾಸಕೋಶದ ಸಮಸ್ಯೆಗಳಿಂದಲೇ ಶೇ 8.5 ಜನ ಮೃತಪಟ್ಟಿದ್ದಾರೆ. ಸರ್ಕಾರದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT