ಮಂಗಳವಾರ, ಸೆಪ್ಟೆಂಬರ್ 28, 2021
26 °C
ಕೆರೆ ಜಾಗದಲ್ಲಿ ಕಟ್ಟಿದ್ದ ಆವರಣ ಗೋಡೆ ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು

ಕೆಂಬತ್ತಹಳ್ಳಿ ಕೆರೆ: ಆದೇಶದ ಬಳಿಕವೂ ನಿಂತಿಲ್ಲ ಒತ್ತುವರಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆರೆ, ಕಾಲುವೆಗಳ ಒತ್ತುವರಿಗೆ ಅವಕಾಶ ಕಲ್ಪಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ ಪದೇ ಪದೇ ಆದೇಶ ಮಾಡುತ್ತಲೇ ಇವೆ. ಕೆರೆಗಳು ಸೇರಿದಂತೆ ಯಾವುದೇ ಜಲಕಾಯಗಳ ಜಾಗವನ್ನು ಸರ್ಕಾರವಾಗಲೀ ಖಾಸಗಿಯವರಾಗಲೀ ಅನ್ಯ ಉದ್ದೇಶಕ್ಕೆ ಬಳಸಲೇಬಾರದು ಎಂದು ಕಂದಾಯ ಇಲಾಖೆಯು ಇದೇ ಜುಲೈ 14ರಂದು ಸುತ್ತೋಲೆ ಹೊರಡಿಸಿದೆ. ಇದಾಗಿ 20 ದಿನಗಳಲ್ಲೇ ಅಂಜನಾಪುರ ವಾರ್ಡ್‌ನ ಕೆಂಬತ್ತಹಳ್ಳಿ ಕೆರೆಯ ಒತ್ತುವರಿ ಪ್ರಯತ್ನ ನಡೆದಿದೆ.

ಈ ಕೆರೆಗೆ ಸಂಬಂಧಿಸಿದ ಜಾಗದಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಆವರಣ ಗೋಡೆ ನಿರ್ಮಿಸಲಾಗಿದೆ. ಆದರೆ, ಸ್ಥಳೀಯರ ಹೋರಾಟದಿಂದ ಹಾಗೂ ಬಿಬಿಎಂಪಿ ಅಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಈ ಪ್ರಯತ್ನ ವಿಫಲಗೊಂಡಿದೆ. ಇಲ್ಲಿ ನಿರ್ಮಿಸುತ್ತಿದ್ದ ತಡೆಗೋಡೆಯನ್ನು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ. 

ಕಂದಾಯ ಇಲಾಖೆಯ ದಾಖಲೆ ಪ್ರಕಾರ ಕೆಂಬತ್ತಹಳ್ಳಿ ಕೆರೆ ಎಂಟು ಎಕರೆ ಏಳು ಗುಂಟೆ ಪ್ರದೇಶದಲ್ಲಿ ವ್ಯಾಪಿಸಿದೆ. ಕೆರೆಯ ಸ್ವಲ್ಪ ಭಾಗ ಒತ್ತುವರಿಯಾಗಿದೆ. ಈ ಕೆರೆಗೆ ಸಂಬಂಧಿಸಿದ ಜಾಗದಲ್ಲಿ ಗ್ರಾಮಸ್ಥರು ಹೆಣಗಳನ್ನು ಹೂಳುತ್ತಿದ್ದರು. ಈ ಜಾಗವನ್ನೇ ಸ್ಮಶಾನ ಎಂದು ಗುರುತಿಸಿ, ಅದಕ್ಕೆ ತಡೆಗೋಡೆ ಕಟ್ಟುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಪ್ರಯತ್ನಗಳು ಪದೇ ಪದೇ ಮರುಕಳಿಸುತ್ತಿವೆ ಎಂಬುದು ಈ ಕೆರೆ ಉಳಿಸಲು ಹೋರಾಟ ನಡೆಸುತ್ತಿರುವ ಕಾರ್ಯಕರ್ತರ ಆರೋಪ.

‘ಕೆಲ ತಿಂಗಳ ಹಿಂದೆ ಇಲ್ಲಿಗೆ ಸಮೀಪ ಅಂಜನಾಪುರ ಕೆರೆಗೆ ಸಂಬಂಧಿಸಿದ ಜಾಗವನ್ನೂ ಸ್ಮಶಾನಕ್ಕಾಗಿ ಒತ್ತುವರಿ ಮಾಡುವ ಪ್ರಯತ್ನ ನಡೆದಿತ್ತು. ಇದರ ಬೆನ್ನಲ್ಲೇ, ಕೆಂಬತ್ತಹಳ್ಳಿ ಕೆರೆಯ ಜಾಗವನ್ನು ಸ್ಮಶಾನಕ್ಕಾಗಿ ಒತ್ತುವರಿ ಪ್ರಯತ್ನ ನಡೆದಿದೆ. ಅಧಿಕೃತವಾಗಿ ಮಂಜೂರಾದ ಜಾಗದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ. ಯಾವ ದಾಖಲೆಗಳೂ ಇಲ್ಲದೇ ಕೆರೆಗೆ ಸಂಬಂಧಿಸಿದ ಜಾಗವನ್ನು ಒತ್ತುವರಿ ಮಾಡುವುದು ಸರಿಯೇ’ ಎಂದು ಪ್ರಶ್ನಿಸುತ್ತಾರೆ ಕೆರೆ ಉಳಿಸುವ ಹೋರಾಟಗಳಲ್ಲಿ ತೊಡಗಿರುವ ಆನಂದ ಯಾದವಾಡ.

‘ಕೆಂಬತ್ತಹಳ್ಳಿ ಕೆರೆಗೆ ಸಂಬಂಧಿಸಿದ ಜಾಗದಲ್ಲಿ ತಡೆಗೋಡೆ ನಿರ್ಮಿಸುವುದನ್ನು ಈ ಕೆರೆಯ ಪರಿವೀಕ್ಷಣೆಗಾಗಿ ನೇಮಿಸಿರುವ ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ನಮ್ಮ ಗಮನಕ್ಕೆ ತಂದಿದ್ದರು. ನಾವು ಈ ತಡೆಗೋಡೆಯನ್ನು ತಕ್ಷಣವೇ ತೆರವುಗೊಳಿಸಿದ್ದೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಿತ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಶಕಗಳಿಂದ ಈ ಜಾಗವನ್ನು ಸ್ಮಶಾನವನ್ನಾಗಿ ಬಳಸುತ್ತಿದ್ದೇವೆ ಎಂದು ಸ್ಥಳೀಯರು ತಗಾದೆ ತೆಗೆದಿದ್ದಾರೆ. ಅದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಕೆರೆಯ ಸರ್ವೆ ನಡೆಸಿದ್ದೇವೆ. ಈ ಜಾಗ ಕೆರೆಗೇ ಸಂಬಂಧಿಸಿದ್ದು ಎಂಬುದು ಸರ್ವೆಯಲ್ಲೂ ಮನದಟ್ಟಾಗಿದೆ. ಈ ಕುರಿತ ಸಮಗ್ರ ವರದಿ ಇನ್ನಷ್ಟೇ ಕೈ ಸೇರಬೇಕಿದೆ’ ಎಂದು ಅವರು ತಿಳಿಸಿದರು.

ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಿ

‘ಕೆಂಬತ್ತಹಳ್ಳಿ ಕೆರೆ ಒಡಲಿಗೆ ಕೊಳಚೆ ನೀರು ಸೇರುತ್ತಿದೆ. ಇದನ್ನು ತಡೆಗಟ್ಟಬೇಕು. ಕೆರೆಗೆ ಸಂಬಂಧಿಸಿ ಜಾಗ ಒತ್ತುವರಿಯಾಗಿದೆ, ಅದನ್ನು ತೆರವುಗೊಳಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಅನ್ಯ ಉದ್ದೇಶಕ್ಕೆ ಈ ಕೆರೆಯ ಜಾಗ ಒತ್ತುವರಿಗೆ  ಶಾಶ್ವತವಾಗಿ ಕಡಿವಾಣ ಬೀಳಬೇಕಾದರೆ ಈ ಜಲಕಾಯವನ್ನು ಬಿಬಿಎಂಪಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸುತ್ತಾರೆ ಸ್ಥಳೀಯ ನಿವಾಸಿ ಶೈಲೇಶ್‌ ಚರಾಟಿ.

ಕೆರೆ ಅಭಿವೃದ್ಧಿಗೆ ಅಲ್ಪಾವಧಿ ಟೆಂಡರ್‌

ಕೆಂಬತ್ತಿಹಳ್ಳಿ ಕೆರೆಯನ್ನು ಮುಖ್ಯಮಂತ್ರಿಯವರ ನವನಗರೋತ್ಥಾನ ಯೋಜನೆ ಅಡಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.  ₹ 3 ಕೋಟಿ ವೆಚ್ಚದ ಕಾಮಗಾರಿಗೆ 2021ರ ಜನವರಿ 30ರಂದು ಅಲ್ಪಾವಧಿ ಟೆಂಡರ್‌ ಕರೆಯಲಾಗಿದೆ.

‘ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಲು ಪ್ರತ್ಯೇಕ ಕಾಲುವೆ ನಿರ್ಮಿಸಬೇಕು. ಈ ಕೆರೆಯ ದಂಡೆಗಳು ಸದೃಢವಾಗಿಲ್ಲ. ಅವುಗಳನ್ನೂ ದುರಸ್ತಿಗೊಳಿಸಬೇಕು. ಕೆರೆಗೆ ನೀರು ಹೊತ್ತು ತರುವ ರಾಜಕಾಲುವೆಗಳಲ್ಲಿ ಹೂಳು ತುಂಬಿದೆ. ಅವುಗಳನ್ನೂ ತೆರವುಗೊಳಿಸಬೇಕಾದ ಅಗತ್ಯ. ಕೆರೆ ಭರ್ತಿಯಾದರೆ ಇದರ ನೀರು ಅಂಜನಾಪುರ ಕೆರೆಗೆ ಸೇರುತ್ತದೆ. ಈ ತೂಬನ್ನೂ ದುರಸ್ತಿಗೊಳಿಸಬೇಕು. ಹಾಗಾಗಿ ಈ ಕೆರೆಯ ಸಮಗ್ರ ಅಭಿವೃದ್ಧಿ ಇಷ್ಟು ಕಡಿಮೆ ಮೊತ್ತ ಸಾಲದು. ಅನುದಾನ ಹೆಚ್ಚಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ಬಿಡಿಎಯಿಂದಲೂ ಒತ್ತುವರಿ?

ಈ ಕೆರೆ ಈ ಹಿಂದೆ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ) ಅಧೀನದಲ್ಲಿತ್ತು. ಬಡಾವಣೆಗೆ ರಸ್ತೆ ನಿರ್ಮಿಸಲು ಬಿಡಿಎ ಕೂಡಾ ಈ ಕೆರೆಯ ಜಾಗವನ್ನು ಒತ್ತುವರಿ ಮಾಡಿದೆ ಎಂದು ದೂರುತ್ತಾರೆ ಸ್ಥಳೀಯರು.

ಬಿಡಿಎ ಈ ಕೆರೆಗೆ ಈ ಹಿಂದೆ ಬೇಲಿಯನ್ನು ನಿರ್ಮಿಸಿತ್ತು. ಆದರೆ, ಅದು ಕೆಲವೆಡೆ ಕಿತ್ತುಹೋಗಿದೆ.  ಹೆಣಗಳನ್ನು ಹೂಳುವ ಸಲುವಾಗಿ ಹಾಗೂ ಗೋರಿಗಳನ್ನು ನಿರ್ಮಿಸಲು ಕೆಲವು ಸ್ಥಳೀಯರೂ ಕೆರೆಯ ಬೇಲಿಯನ್ನೂ ಕಿತ್ತು ಹಾಕಿದ್ದಾರೆ. 

‘ಈ ಕೆರೆ ಜಾಗ ಒತ್ತುವರಿಯಾಗಿರುವುದು ನಿಜ.  ಬಿಡಿಎ ಅಧೀನದಲ್ಲಿದ್ದ ಈ ಜಲಕಾಯವು ಬಿಬಿಎಂಪಿಗೆ ನಾಲ್ಕು ವರ್ಷಗಳ ಹಿಂದಷ್ಟೇ ಹಸ್ತಾಂತರವಾಗಿದೆ. ಆದರೆ, ಬಿಬಿಎಂಪಿ ಸ್ವಾಧೀನಕ್ಕೆ ಬಂದ ಬಳಿಕ ಕೆರೆಯ ಯಾವುದೇ ಜಾಗ ಒತ್ತುವರಿಯಾಗಲು ಅವಕಾಶ ಕಲ್ಪಿಸಿಲ್ಲ. ಎಷ್ಟು ಜಾಗ ಒತ್ತುವರಿಯಾಗಿದೆ ಎಂಬುದನ್ನು ನಿಖರವಾಗಿ ತಿಳಿಯಲು ಶೀಘ್ರವೇ ಟೋಟಲ್‌ ಸ್ಟೇಷನ್‌ ಸರ್ವೆ ನಡೆಸಲಿದ್ದೇವೆ’ ಎಂದು ನಿತ್ಯಾ ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು