ಮಂಗಳವಾರ, ಏಪ್ರಿಲ್ 20, 2021
29 °C

ಕಾಲುವೆ ಕಾಮಗಾರಿ: ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೃಷಭಾವತಿ ಕಾಲುವೆ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿದು ಕಾರ್ಮಿಕ ಚಂಚಲ್ ಬುರ್ಮಾನ್ (21) ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದ ಚಂಚಲ್, ಕೆಲ ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ವಾಸ್ತು ಪ್ರಾಪರ್ಟೀಸ್‌ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಬುಧವಾರ ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಕೆಂಗೇರಿ ಪೊಲೀಸರು ಹೇಳಿದರು.

‘ವಾಸ್ತು ಪ್ರಾಪರ್ಟೀಸ್ ಕಂಪನಿಯಿಂದ ಕಾಲುವೆಗೆ ಹೊಂದಿಕೊಂಡಿರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಲಾಗುತ್ತಿದೆ. ಕಟ್ಟಡದ ಜಾಗಕ್ಕೆ ನೀರು ನುಗ್ಗಬಾರದೆಂದು ಕಾಲುವೆಗೆ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ನಿರ್ಮಾಣದ ಹೊಣೆಯನ್ನು ಪಶ್ಚಿಮ ಬಂಗಾಳದವರೇ ಆದ ಗಣೇಶ್ ಬುರ್ಮಾನ್‌ಗೆ ನೀಡಲಾಗಿತ್ತು.’

‘ತನ್ನದೇ ಊರಿನಿಂದ 15ಕ್ಕೂ ಹೆಚ್ಚು ಕಾರ್ಮಿಕರನ್ನು ನಗರಕ್ಕೆ ಕರೆದುಕೊಂಡು ಬಂದಿದ್ದ ಗಣೇಶ್, ಕಂಪನಿ ಹೆಸರಿನಲ್ಲಿ ಕಾಮಗಾರಿ ಆರಂಭಿಸಿದ್ದರು. ಪಾಯ ಅಗೆದು ತಡೆಗೋಡೆ ನಿರ್ಮಾಣ ಕೆಲಸ ಆರಂಭಿಸಲಾಗಿತ್ತು’ ಎಂದೂ ಪೊಲೀಸರು ತಿಳಿಸಿದರು.

ಉಸಿರುಗಟ್ಟಿ ಸಾವು: ‘ಬುಧವಾರ ಕೆಲಸಕ್ಕೆ ಬಂದಿದ್ದ ಚಂಚಲ್, ಕಾಮಗಾರಿ ಸ್ಥಳದಲ್ಲಿ ಗುಂಡಿ‌ ಅಗೆಯುತ್ತಿದ್ದರು. ಅದೇ ಸಂದರ್ಭದಲ್ಲೇ ಮಣ್ಣು ಅವರ ಮೇಲೆ ಬಿದ್ದಿತ್ತು. ಮಣ್ಣಿನಡಿ ಸಿಲುಕಿದ್ದ ಅವರು, ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿಯಲ್ಲಿದ್ದ ಮಣ್ಣಿನಡಿ ಸಿಲುಕಿದ್ದ  ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳದಲ್ಲಿ  ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಉಪ ಗುತ್ತಿಗೆದಾರ ಗಣೇಶ್ ಬುರ್ಮಾನ್‌ನನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು