ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎಗೆ ಬೇಕಿಲ್ಲ; ಬಿಎಂಆರ್‌ಸಿಎಲ್‌ಗೆ ನೆನಪಿಲ್ಲ!

ನಿರ್ವಹಣೆ ಇಲ್ಲದೆ ಸೊರಗಿದ ಕೆಂಗೇರಿ ಕೆರೆ l 25 ಎಕರೆ ವಿಸ್ತೀರ್ಣದ ಕೆರೆ
Last Updated 6 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ದೋಣಿ ವಿಹಾರದ ಕಾರಣದಿಂದಾಗಿ ಜನರ ಗಮನ ಸೆಳೆಯುತ್ತಿದ್ದ ಕೆಂಗೇರಿ ಕೆರೆ ಈಗ ಹಾಳು ಬಿದ್ದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಈ ಕೆರೆಯನ್ನು ಹಸ್ತಾಂತರಿಸಿತ್ತು. ಈ ಕೆರೆಯ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆಯೇ ರೂಪರೇಷೆಯನ್ನೂ ಸಿದ್ಧಪಡಿಸಿದ್ದ ಬಿಎಂಆರ್‌ಸಿಎಲ್‌, ಅದರ ಅನುಷ್ಠಾನದತ್ತ ಗಮನವನ್ನೇ ಹರಿಸಿಲ್ಲ.

ಕೆಂಗೇರಿ ಕೆರೆಯನ್ನು 2005ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 25 ಎಕರೆ ವಿಸ್ತೀರ್ಣದ ಈ ಕೆರೆಯ ಸುತ್ತ ಬೇಲಿ ಅಳವಡಿಸಲಾಗಿತ್ತು. ಕೆರೆಯಲ್ಲಿ ದ್ವೀಪ ಹಾಗೂ ವಿಹಾರ ಪಥಗಳನ್ನು ನಿರ್ಮಿಸಲಾಗಿತ್ತು. ಆದರೆ, ನಿರ್ವಹಣೆ ಇಲ್ಲದೇ ಕೆರೆ ಸೊರಗಿದೆ. ಅದರಲ್ಲಿ ಕಳೆ ಹಾಗೂ ಜೌಗು ಸಸ್ಯಗಳು ಬೆಳೆದಿವೆ.

ಕೆಂಗೇರಿ ಕೆರೆಯನ್ನು ಸಾಮಾಜಿಕ ಹೊಣೆಗಾರಿಕೆ ಅಡಿ ಅಭಿವೃದ್ಧಿ ಪಡಿಸಲು ಬಿಎಂಆರ್‌ಸಿಎಲ್‌ ಒಪ್ಪಿತ್ತು.2012ರ ಅಕ್ಟೋಬರ್‌ನಲ್ಲಿಯೇ ಬಿಡಿಎ ಈ ಕೆರೆಯನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿದೆ. ಬಳಿಕ ಕೆರೆಯ ಪುನರುಜ್ಜೀವನ, ಈ ಪರಿಸರದ ಸುಂದರೀಕರಣ ಹಾಗೂ ನಿರ್ವಹಣೆಯ ಹೊಣೆ ಬಿಎಂಆರ್‌ಸಿಎಲ್‌ನದು.

‘ಕೆಂಗೇರಿಕೆರೆ ಪರಿಸರವನ್ನು ಸ್ವಚ್ಛವಾಗಿಡಲು, ಸೌಂದರ್ಯವನ್ನು ಕಾಪಾಡಲು ಹಾಗೂ ಜಲಚರಗಳು ಬದುಕಲು ಯೋಗ್ಯವಾಗಿರುವಂತೆ ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಯೋಜನೆ ರೂಪಿಸುವುದಾಗಿ ಬಿಎಂಆರ್‌ಸಿಎಲ್‌ ಹೇಳಿತ್ತು. ಈಗ, ಬಿಡಿಎ, ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್‌ ಯಾರೂ ಕೂಡ ಕೆರೆಯ ನಿರ್ವಹಣೆಯ ಕಡೆಗೆ ಗಮನ ಕೊಟ್ಟಿಲ್ಲ’ ಎಂದು ಕೆಂಗೇರಿ ನಿವಾಸಿ ಜಗದೀಶ್ ದೂರುತ್ತಾರೆ.

ಹೂಳಿನ ಸಮಸ್ಯೆ: ಇಲ್ಲಿ ವಿಹಾರ ಪಥ, ಬೋಟಿಂಗ್‌, ಮಕ್ಕಳ ಆಟದ ತಾಣ, ಮನರಂಜನಾ ತಾಣ, ಹಸಿರು ಪ್ರದೇಶ, ದ್ವೀಪ, ಕುಳಿತು ವಿಶ್ರಾಂತಿ ಪಡೆಯುವ ತಾಣಗಳನ್ನು ರೂಪಿಸುವ ₹ 8.75 ಕೋಟಿ ವೆಚ್ಚದ ಯೋಜನೆಯನ್ನು ಬಿಎಂಆರ್‌ಸಿಎಲ್‌ ಸಿದ್ಧಪಡಿಸಿತ್ತು. ಈ ಯೋಜನೆಗೆ ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವೂ ಮಂಜೂರಾತಿ ನೀಡಿತ್ತು.

2017ರ ಜೂನ್‌ 30ರಂದೇ ಟೆಂಡರ್‌ ಕೂಡ ಆಹ್ವಾನಿಸಲಾಗಿತ್ತು. ಅಲ್ಲದೆ, ಗುತ್ತಿಗೆ ಪಡೆಯುವ ಕಂಪನಿ 12 ತಿಂಗಳೊಳಗೆ ಕೆರೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬ ಷರತ್ತನ್ನು ಕೂಡ ವಿಧಿಸಲಾಗಿತ್ತು. ಎರಡು ವರ್ಷ ಕಳೆದರೂ ಕೆರೆಯ ಸ್ಥಿತಿ ಸುಧಾರಿಸಿಲ್ಲ. ಅರ್ಧದಷ್ಟು ಕೆರೆ ಬತ್ತಿ ಹೋಗಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡಿದೆ.

‘ಪ್ರವಾಸಿ ತಾಣವನ್ನಾಗಿಸಿ’

‘ಈ ಕೆರೆಯ ಅಭಿವೃದ್ಧಿಯಿಂದ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ಹಲವು ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದ್ದವು. ಇದನ್ನು ಚಟುವಟಿಕೆಯ ತಾಣವನ್ನಾಗಿಸುವ ಬಗ್ಗೆ ಭರವಸೆ ನೀಡಿದ್ದ ಬಿಎಂಆರ್‌ಸಿಎಲ್‌ ಈಗ ಅದನ್ನು ಮರೆತಿದೆ’ ಎಂದು ಕೆಂಗೇರಿ ನಿವಾಸಿ ನಂದಕುಮಾರ್‌ ದೂರಿದರು.

‘ನಮ್ಮ ಮೆಟ್ರೊ ಮಾರ್ಗದ ಪಕ್ಕದಲ್ಲಿಯೇ ಈ ಕೆರೆ ಇರುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಹೆಚ್ಚು ಅವಕಾಶಗಳಿವೆ. ಈ ಜಲಮೂಲದ ಅಭಿವೃದ್ಧಿಯಿಂದ ಮಾಲಿನ್ಯ ನಿಯಂತ್ರಣವಾಗುವುದಲ್ಲದೆ, ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ. ಬಿಎಂಆರ್‌ಸಿಎಲ್‌ ಆದಷ್ಟು ಬೇಗ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT