ಕೇರಳ ಪ್ರವಾಹ: ರೈಲು ನಿಲ್ದಾಣದಿಂದ ಪರಿಹಾರ ಸಾಮಗ್ರಿ

7
ಕೇರಳ ಪ್ರವಾಹ: ಪ್ರತ್ಯೇಕ ಪಾರ್ಸೆಲ್ ಬೋಗಿ ಮೀಸಲು

ಕೇರಳ ಪ್ರವಾಹ: ರೈಲು ನಿಲ್ದಾಣದಿಂದ ಪರಿಹಾರ ಸಾಮಗ್ರಿ

Published:
Updated:
Deccan Herald

ಬೆಂಗಳೂರು: ಕೇರಳ ಪ್ರವಾಹ ಸಂತ್ರಸ್ತರಿಗೆ ರೈಲ್ವೆ ಇಲಾಖೆ ಮತ್ತು ಉದ್ಯೋಗಿಗಳು ಸೇರಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ಹೊದಿಕೆ, ಬಟ್ಟೆ, ನೀರು, ಆಹಾರ ಧಾನ್ಯ, ಔಷಧ, ನ್ಯಾಪ್‌ಕಿನ್‌ಗಳು, ಸಿದ್ಧ ಆಹಾರ, ಎಣ್ಣೆ, ಈರುಳ್ಳಿ... ಹೀಗೆ ‌ಬಗೆಬಗೆಯ ಸಾಮಗ್ರಿಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಂಗ್ರಹವಾಗಿವೆ.

‘ಇದುವರೆಗೆ 18 ಟನ್‌ಗಳಷ್ಟು ಸಾಮಗ್ರಿಗಳು ಸಂಗ್ರಹವಾಗಿವೆ. ಇದನ್ನು ಪಾಲಕ್ಕಾಡ್ ಜಂಕ್ಷನ್ ನಿಲ್ದಾಣಕ್ಕೆ ಕಳುಹಿಸಲಾಗುವುದು. ಅಲ್ಲಿನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಗತ್ಯವಿರುವ ಕಡೆಗೆ ರವಾನಿಸಲಾಗುವುದು’ ಎಂದು ಈ ಸಾಮಗ್ರಿ ರವಾನೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ ಕೆ.ಆಸಿಫ್ ವಿವರಿಸಿದರು.

‘ಈ ಸಾಮಗ್ರಿ ರವಾನಿಸಲು ಪಾರ್ಸೆಲ್ ಬೋಗಿಯೊಂದನ್ನು ಮೀಸಲಿರಿಸಲಾಗಿದೆ. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಾಮಗ್ರಿ ಸಂಗ್ರಹ ಮತ್ತು ಜೋಡಣೆಯಲ್ಲಿ ತೊಡಗಿದ್ದಾರೆ. ನೈಋತ್ಯ ರೈಲ್ವೆ ವಿಭಾಗದ ಉದ್ಯೋಗಿಗಳು, ಮಹಿಳಾ ಕಲ್ಯಾಣ ಸಂಘ ಈ ಕಾರ್ಯದಲ್ಲಿ ಕೈಜೋಡಿಸಿವೆ. ಸ್ಕೌಟ್‌ನಲ್ಲಿ ತರಬೇತಿ ಪಡೆದ ಇಲಾಖೆಯ ಸಿಬ್ಬಂದಿಯನ್ನು ಸ್ವಯಂ ಸೇವಕರನ್ನಾಗಿ ಕಳುಹಿಸಲಾಗುವುದು’ ಎಂದು ಅವರು ವಿವರಿಸಿದರು.

‘ರಾಜ್ಯದ ಇತರ ನಿಲ್ದಾಣಗಳಲ್ಲೂ ಪರಿಹಾರ ಸಾಮಗ್ರಿ ಸಂಗ್ರಹ ನಡೆದಿದೆ. ರೈಲುಗಳ ಲಭ್ಯತೆ ಆಧಾರದ ಮೇಲೆ ಸಾಮಗ್ರಿಗಳನ್ನು ಕಳುಹಿಸಲಾಗುವುದು’ ಎಂದು ಆಸಿಫ್ ಹೇಳಿದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ ಮಾತನಾಡಿ, ‘ಈ ಸಾಮಗ್ರಿಗಳನ್ನು ಯಶವಂತಪುರದಿಂದ ಪಾಲಕ್ಕಾಡ್‌ಗೆ ತೆರಳುವ ರೈಲಿನಲ್ಲಿ ಕಳುಹಿಸಲಾಗುವುದು. ಸಾರ್ವಜನಿಕರು ಪರಿಹಾರ ಸಾಮಗ್ರಿ ನೀಡಿದರೆ ಅವುಗಳನ್ನೂ ಇದೇ ಬೋಗಿಯಲ್ಲಿ ಉಚಿತವಾಗಿ ಒಯ್ಯಲಾಗುವುದು. ಹಾಗೆ ದಾನ ನೀಡುವವರು ಆಸಿಫ್‌ (ಮೊ. 97316 66600) ಅವರನ್ನು ಸಂಪರ್ಕಿಸಬಹುದು. ‌ಸಾಮಗ್ರಿಗಳು ಸಂಗ್ರಹವಾಗುತ್ತಿದ್ದಂತೆಯೇ ತ್ವರಿತವಾಗಿ ರವಾನಿಸಲಾಗುವುದು’ ಎಂದು ಅವರು ಹೇಳಿದರು. 

ಸಕಲೇಶಪುರ ಮಾರ್ಗವಾಗಿ ಹೀಗುವ ಎಲ್ಲ ರೈಲುಗಳನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ರದ್ದಾದ ರೈಲುಗಳ ಮುಂಗಡ ಬುಕ್ಕಿಂಗ್‌ ಹಣವನ್ನು ವಾಪಸ್‌ ನಿಡಲಾಗುತ್ತದೆ. ಪ್ರಯಾಣಿಕರೇ ಟಿಕೆಟ್‌ ರದ್ದುಗೊಳಿಸಿದಲ್ಲಿ ರದ್ದತಿ ಶುಲ್ಕ ಮುರಿದು ಹಣ ವಾಪಸ್‌ ನೀಡಲಾಗುತ್ತದೆ ಎಂದು ಸಕ್ಸೇನಾ ವಿವರಿಸಿದರು. 

ಇದುವರೆಗೆ ಸಂಗ್ರಹವಾದದ್ದು

ತಲಾ 25 ಕೆಜಿ ತೂಕದ 65 ಚೀಲ ಅಕ್ಕಿ. 50 ಕೆಜಿ ತೂಕದ 69 ಚೀಲ ರವೆ. 50 ಕೆಜಿ ತೂಕದ 29 ಚೀಲ ಗೋಧಿ ಹಿಟ್ಟು. ತಲಾ 15 ಕೆಜಿ ತೂಕದ 11 ಎಣ್ಣೆ ಡಬ್ಬ, ನೂರು ನೀರಿನ ಕ್ಯಾನ್‌ಗಳು (ತಲಾ 20 ಲೀಟರ್‌ ಸಾಮರ್ಥ್ಯ), ಒಂದೂವರೆ ಕ್ವಿಂಟಲ್‌ ಬೇಳೆ, 50 ಕೆಜಿ ಬಟಾಣಿ, 20 ಕೆಜಿ ಹಾಲಿನಪುಡಿ, 5 ಬಾಕ್ಸ್‌ಗಳಷ್ಟು ಹಾಲಿನ ಟೆಟ್ರಾ ಪ್ಯಾಕ್‌, 40 ಕೆಜಿ ಚಹಾಪುಡಿ, 1200 ಟೂತ್‌ಪೇಸ್ಟ್‌ ಮತ್ತು ಬ್ರಷ್‌, 30 ಕೆಜಿ ಬೆಲ್ಲ , 50 ಕೆಜಿ ಸಕ್ಕರೆ, 5 ಸಾವಿರ ಬೆಡ್‌ಷೀಟ್‌, 1,200 ಕಂಬಳಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !