ಸೋಮವಾರ, ಮೇ 23, 2022
24 °C
ಹೈಕೋರ್ಟ್ ತಳಮಹಡಿಯ ಕಚೇರಿಗಳ ಸ್ಥಳಾಂತರ

ಕೆಜಿಐಡಿ–ವಕೀಲರ ಪರಿಷತ್‌ ಕಟ್ಟಡ ನೀಡಲು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರ: ‘ಕಬ್ಬನ್‌ ಪಾರ್ಕ್‌ನಲ್ಲಿರುವ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ರಾಜ್ಯ ವಿಮಾ ಇಲಾಖೆಯ ಕಟ್ಟಡಗಳನ್ನು (ಕೆಜಿಐಡಿ) ಹೈಕೋರ್ಟ್‌ ಸುಪರ್ದಿಗೆ ನೀಡಬೇಕು. ಹೈಕೋರ್ಟ್‌ನ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. 

ಹೈಕೋರ್ಟ್ ಕಟ್ಟಡದ ತಳಮಹಡಿಯಲ್ಲಿರುವ (ಬೇಸ್‌ಮೆಂಟ್) ಎಲ್ಲ ಕಚೇರಿಗಳ ತೆರವಿಗೆ ಆದೇಶಿಸಲು ಕೋರಿ ತುಮಕೂರಿನ ವಕೀಲ ಎಲ್.ರಮೇಶ್ ನಾಯ್ಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ‘ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಈಗಾಗಲೇ ಹೈಕೋರ್ಟ್‌ಗೆ ನೀಡಲಾಗಿದೆ. ಸದ್ಯ ಅಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗುತ್ತಿಲ್ಲ’ ಎಂದರು.

ಹೈಕೋರ್ಟ್ ಪರ ಹಿರಿಯ ವಕೀಲ ಎಸ್.ಎಸ್.ನಾಗಾನಂದ, ‘ಹೈಕೋರ್ಟ್‌ನ ಸಮೀಪದಲ್ಲೇ ಇರುವ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ಕೆಜಿಐಡಿ ಕಚೇರಿಗಳಿರುವ ಕಟ್ಟಡಗಳನ್ನು ಹೈಕೋರ್ಟ್‌ಗೆ ಹಸ್ತಾಂತರಿಸಿದರೆ ಈ ಸಮಸ್ಯೆ ತಕ್ಷಣವೇ ಬಗೆಹರಿಯಲಿದೆ’ ಎಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಈ ಎರಡೂ ಕಟ್ಟಡಗಳನ್ನು ಹೈಕೋರ್ಟ್‌ಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸರ್ಕಾರವನ್ನು ಕೋರುತ್ತಿದೆ’ ಎಂದು ಹೇಳಿತು.

‘ಹೈಕೋರ್ಟ್ ಕಟ್ಟಡದ ತಳಮಹಡಿಯ ಜಾಗವನ್ನು ಕಚೇರಿಗಳನ್ನಾಗಿ ಬಳಸುವುದು ನಿಯಮಗಳಿಗೆ ವಿರುದ್ಧ. ಹೆಚ್ಚುವರಿ ಜಾಗ ಕಲ್ಪಿಸಿದರೆ ಅಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಬಹುದು. ಸರ್ಕಾರವು ಈ ಬಗ್ಗೆ ಸಕಾರಾತ್ಮಕವಾಗಿ ಉತ್ತರಿಸುವ ಎಂಬ ವಿಶ್ವಾಸವನ್ನು ನ್ಯಾಯಾಲಯ ಹೊಂದಿದೆ’ ಎಂದು ತಿಳಿಸಿತು.  ವಿಚಾರಣೆಯನ್ನು 2022ರ ಜನವರಿ 6ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.