ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಮಾವು ಕೋದಂಡರಾಮ ಬ್ರಹ್ಮ ರಥೋತ್ಸವ

Published 28 ಏಪ್ರಿಲ್ 2024, 19:24 IST
Last Updated 28 ಏಪ್ರಿಲ್ 2024, 19:24 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಬನ್ನೇರುಘಟ್ಟ ರಸ್ತೆಯ ಹುಳಿಮಾವು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವರ ಬ್ರಹ್ಮರಥೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತೇರಿಗೆ ಹಣ್ಣು–ದವನ ಎಸೆಯುವ ಮೂಲಕ ಧನ್ಯತಾಭಾವ ಮೆರೆದರು. ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳನ್ನು ಹೊತ್ತ ರಥವನ್ನು ಡೊಳ್ಳು ಕುಣಿತ, ತಮಟೆ, ನಗಾರಿ, ವಾದ್ಯ ಮೇಳದೊಂದಿಗೆ ದೇವಸ್ಥಾನದ ಸುತ್ತ ಭಕ್ತರು ಎಳೆದು ಸಂಭ್ರಮಿಸಿದರು.

ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೃಷ್ಣ ಗಂಧೋತ್ಸವ, ಹೂವಿನ ಸೇವೆ, ಆಸ್ಥಾನ ಸೇವೆ, ಮಹಾಮಂಗಳಾರತಿ, ರಥ ಪ್ರತಿಷ್ಠೆ ನಡೆದವು. ಮಧ್ಯಾಹ್ನ ಮಂತ್ರಪುಷ್ಪ ಮಹಾ ಮಂಗಳಾರತಿ, ಹೂವಿನ ಸೇವೆ ಅದ ನಂತರ ಬ್ರಹ್ಮರಥೋತ್ಸವ ನಡೆಯಿತು.

ಕೇರಳದ ಚೆಂಡೆವಾದ್ಯ, ನಂದಿಧ್ವಜ ಕುಣಿತ, ಕೀಲುಕುದುರೆ, ಡೊಳ್ಳುಕುಣಿತ, ಬಾಣಬಿರುಸು, ಪಟ್ಟದ ಕುಣಿತ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆದವು. ರಥೋತ್ಸವದಲ್ಲಿ ಭಾಗವಹಿಸುವ ಸಾವಿರಾರು ಭಕ್ತರ ದಾಹ ಮತ್ತು ಹಸಿವು ತಣಿಸಲು ಗ್ರಾಮಸ್ಥರು ಅಲ್ಲಲ್ಲಿ ಅರವಂಟಿಕೆಗಳನ್ನು ಹಾಕಿ ಅನ್ನದಾನ, ಕುಡಿಯುವ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಿದರು.

ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದವರೆಗೆ ಕೋದಂಡರಾಮಸ್ವಾಮಿ ದೇವರೊಂದಿಗೆ ಮುತ್ತುರಾಯಸ್ವಾಮಿ, ಆಂಜನೇಯಸ್ವಾಮಿ, ವಿನಾಯಕಸ್ವಾಮಿ, ಆಲದಮರದ ದೊಡ್ಡಮ್ಮದೇವಿ, ಶಂಭುಲಿಂಗೇಶ್ವರಸ್ವಾಮಿ, ವೆಂಕಟರಮಣಸ್ವಾಮಿ, ಸೋಮೇಶ್ವರ, ಶ್ರೀಕೃಷ್ಣದೇವರು ಸೇರಿದಂತೆ 50ಕ್ಕೂ ಹೆಚ್ಚು ದೇವರುಗಳು ಹೂವಿನ ಪಲ್ಲಕ್ಕಿ ಹಾಗೂ ಮುತ್ತಿನ ಪಲ್ಲಕ್ಕಿಯಲ್ಲಿ ಹುಳಿಮಾವು ಬಡಾವಣೆಯ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT