ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಜೀಪಿನ ಸೈರನ್‌ನಿಂದ ಉಳಿದ ಪ್ರಾಣ

ಅಪಹರಿಸಿ ಕೊಲೆಗೆ ಯತ್ನ: ತಂದೆ–ಮಗ ಸೇರಿ ನಾಲ್ವರ ಬಂಧನ
Last Updated 6 ಡಿಸೆಂಬರ್ 2020, 21:27 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣ ಭೇದಿಸಿರುವ ಪೊಲೀಸರು, ತಂದೆ–ಮಗ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮಹಮ್ಮದ್ ಅಲಿ, ಅವರ ಮಗ ಮುಜಾಮಿಲ್, ಕಲೀಂ ಹಾಗೂ ತನ್ವೀರ್ ಬಂಧಿತರು. ಇವರೆಲ್ಲರೂ ಸೇರಿ ಸರ್ಜಾಪುರದ ನಿವಾಸಿ ಅಮ್ಜದ್‌ ಖಾನ್ ಎಂಬುವರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಆಯುಧಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿ ಮಹಮ್ಮದ್ ಅಲಿ ಅವರ ಪತ್ನಿಯನ್ನು ಕೆಲ ವರ್ಷಗಳ ಹಿಂದೆ ಅಮ್ಜದ್‌ ಖಾನ್ ಎರಡನೇ ಮದುವೆಯಾಗಿದ್ದರು. ಅದೇ ವಿಷಯವಿಟ್ಟುಕೊಂಡು ಅಮ್ಜದ್ ಖಾನ್, ಪದೇ ಪದೇ ಮಹಮ್ಮದ್ ಅಲಿ ಅವರನ್ನು ಹೀಯಾಳಿಸುತ್ತಿದ್ದರು. ಹಲವು ಬಾರಿ ಜಗಳವೂ ಆಗಿತ್ತು. ಅದರಿಂದ ಬೇಸತ್ತಿದ್ದ ಆರೋಪಿ, ಮಗ ಹಾಗೂ ಸ್ನೇಹಿತರ ಜೊತೆ ಸೇರಿ ಕೃತ್ಯ ಎಸಗಿದ್ದರು’ ಎಂದೂ ಮೂಲಗಳು ಹೇಳಿವೆ.

‘ಟ್ಯಾನರಿ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಅಮ್ಜದ್‌ಖಾನ್ ಬಂದಿದ್ದರು. ಇದು ಗೊತ್ತಾಗುತ್ತಿ
ದ್ದಂತೆ ಆರೋಪಿಗಳು ಹಿಂಬಾಲಿಸಿದ್ದರು. ರಸ್ತೆಯಲ್ಲೇ ಜಗಳ ತೆಗೆದು ಅಮ್ಜದ್‌ಖಾನ್ ಅವರನ್ನು ಅಪಹರಿಸಿ ಕಾರಿನಲ್ಲಿ ತಮಿಳುನಾಡಿಗೆ ಕರೆದೊಯ್ದಿದ್ದರು. ಕಾರಿನಲ್ಲಿ ಹಲ್ಲೆಯನ್ನೂ ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಗಸ್ತಿನಲ್ಲಿದ್ದ ಎಸಿಪಿ ಬರುತ್ತಿದ್ದಂತೆ ಪರಾರಿ: ‘ಅಮ್ಜದ್‌ಖಾನ್ ಅವರನ್ನು ತಮಿಳುನಾಡಿನಿಂದ ಡಿ. 4ರಂದು ತಡರಾತ್ರಿ ನಗರಕ್ಕೆ ಕರೆತಂದಿದ್ದ ಆರೋಪಿಗಳು, ಬಂಬೂ ಬಜಾರ್ ಬಳಿ ಕಾರು ನಿಲ್ಲಿಸಿದ್ದರು. ಅಲ್ಲಿಯೇ ಅಮ್ಜದ್‌ಖಾನ್ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ರಾತ್ರಿ ಗಸ್ತಿನಲ್ಲಿದ್ದ ಎಸಿಪಿಯೊಬ್ಬರು, ಅದೇ ರಸ್ತೆ ಮೂಲಕ ಹೊರಟಿದ್ದರು. ಪೊಲೀಸ್ ಜೀಪಿನ ಸೈರನ್‌ ಕೇಳಿದ ಕೂಡಲೇ ಆರೋಪಿಗಳು ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳಕ್ಕೆ ಹೋಗಿದ್ದ ಎಸಿಪಿ, ರಸ್ತೆಯಲ್ಲಿ ನರಳಾಡುತ್ತಿದ್ದ ಅಮ್ಜದ್‌ ಖಾನ್ ಅವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದರು.’

‘ಘಟನೆ ಬಗ್ಗೆ ನಿಯಂತ್ರಣ ಕೊಠಡಿಗೆ ಎಸಿಪಿ ಮಾಹಿತಿ ನೀಡಿದ್ದರು. ತಡರಾತ್ರಿ ಕಾರ್ಯಾಚರಣೆ ಆರಂಭಿಸಿದ್ದ ಶಿವಾಜಿನಗರ ಪೊಲೀಸರು, ಮರುದಿನ ನಸುಕಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.’

‘ಬಂಧಿತ ಆರೋಪಿಗಳು, ಸಂಬಂಧಿಕರು. ಎಸಿಪಿ ಅವರು ಸ್ಥಳಕ್ಕೆ ಹೋಗದಿದ್ದರೆ, ಅವರೆಲ್ಲರೂ ಸೇರಿ ಅಮ್ಜದ್‌ಖಾನ್ ಅವರನ್ನು ಕೊಲೆ ಮಾಡುವ ಸಾಧ್ಯತೆ ಇತ್ತು. ಎಸಿಪಿಯಿಂದಲೇ ಪ್ರಾಣ
ಉಳಿದಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT