ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಅಪಹರಿಸಿ ₹ 2 ಕೋಟಿಗೆ ಬೇಡಿಕೆ

* ಗಾಳಿಪಟ ಕೊಡಿಸುವ ಸೋಗಿನಲ್ಲಿ ಮನೆಗೆ ಬಂದಿದ್ದ ಆರೋಪಿಗಳು * ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆ; ಆರು ಮಂದಿ ಬಂಧನ
Last Updated 29 ಆಗಸ್ಟ್ 2020, 20:56 IST
ಅಕ್ಷರ ಗಾತ್ರ

ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರ ಮಗನನ್ನು ಅಪಹರಿಸಿ ಆತನ ಬಿಡುಗಡೆ ಮಾಡಲು ₹ 2 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದಡಿ ಆರು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸಿ ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

ಶಿವಾಜಿನಗರದ ಮೊಹಮ್ಮದ್ ಝೈನ್ (22), ಭಾರತಿನಗರದ ಫಾಹೀಂ (18), ಮುಜಾಮಿಲ್ (18), ಪೈಜಾನ್ (20) ಮೊಹಮ್ಮದ್ ಷಾಹೀದ್ (19) ಹಾಗೂ ಖಲೀಲ್ (20) ಬಂಧಿತರು.

‘ಭಾರತಿನಗರದ ಮೊಹಮ್ಮದ್ ಸಾದಿಕ್ ಮತ್ತು ಆಸ್ಮಾ ನಾಜ್ ದಂಪತಿ ಮಗನಾದ 11 ವರ್ಷದ ಮೊಹಮ್ಮದ್ ಉಮರ್ ಅಲಿಯನ್ನು ಶುಕ್ರವಾರ ಸಂಜೆ ಆರೋಪಿಗಳು ಅಪಹರಿಸಿದ್ದರು. ‘₹ 2 ಕೋಟಿ ಕೊಟ್ಟರೆ ಮಾತ್ರ ಬಾಲಕನನ್ನು ಬಿಡುತ್ತೇವೆ. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಪಹರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಹಾಗೂ ತಂಡದವರು ಚುರುಕಿನ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಕೆಲಸ ಮೆಚ್ಚಿ ₹50 ಸಾವಿರ ಬಹುಮಾನ ನೀಡಲಾಗಿದೆ’ ಎಂದೂ ವಿವರಿಸಿದರು.

ವ್ಯಾಪಾರಿಯನ್ನು ಹಿಂಬಾಲಿಸಿ ಕೃತ್ಯ: ‘‍ಬಟ್ಟೆ ವ್ಯಾಪಾರಿಯಾಗಿದ್ದ ಮೊಹಮ್ಮದ್ ಸಾದಿಕ್, ತಿಮ್ಮಯ್ಯ ರಸ್ತೆಯಲ್ಲಿ ಸ್ವಂತ ಅಂಗಡಿ ಹೊಂದಿದ್ದರು. ನಿತ್ಯ ವ್ಯಾಪಾರದ ಹಣವನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಅದನ್ನು ತಿಳಿದುಕೊಂಡಿದ್ದ ಮೊಹಮ್ಮದ್ ಝೈನ್, ಸಹಚರರ ಜೊತೆ ಸಂಚು ರೂಪಿಸಿ ಕೃತ್ಯ ಎಸಗಿದ್ದ’ ಎಂದು ಕಮಲ್ ಪಂತ್ ಹೇಳಿದರು.

‘ಬಾಲಕ ಉಮರ್ ಅಲಿಗೆ ಗಾಳಿಪಟವೆಂದರೆ ಅಚ್ಚುಮೆಚ್ಚು. ಗಾಳಿಪಟ ಕೊಡಿಸುವ ನೆಪದಲ್ಲಿ ಆರೋಪಿಗಳು ಆತನನ್ನು ಪರಿಚಯ ಮಾಡಿಕೊಂಡಿದ್ದರು.ಶುಕ್ರವಾರ ಸಂಜೆ ದಂಪತಿ, ಶಾಪಿಂಗ್‌ಗಾಗಿ ಹೊರಗಡೆ ಹೋಗಿದ್ದರು. ಬಾಲಕ ಹಾಗೂ ಆತನ ಸಹೋದರಿ ಮಾತ್ರ ಮನೆಯಲ್ಲಿದ್ದರು. ಮನೆ ಬಳಿ ಬಂದಿದ್ದ ಆರೋಪಿಗಳು, ಗಾಳಿಪಟ ಕೊಡಿಸುವುದಾಗಿ ಹೇಳಿ ಆತನನ್ನು ಹೊರಗೆ ಕರೆಸಿಕೊಂಡು ಅಪಹರಿಸಿದ್ದರು. ರಾತ್ರಿ ಪೋಷಕರು ಮನೆಗೆ ಬಂದಾಗಲೇ ವಿಷಯ ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು. ತಡರಾತ್ರಿ ಕರೆ ಮಾಡಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದೂ ಹೇಳಿದರು.

ಪಾನೀಯದಲ್ಲಿ ನಿದ್ರೆ ಮಾತ್ರೆ:‘ಭಾರತಿನಗರದ ಮನೆಯಿಂದ ಬೈಕ್‌ನಲ್ಲಿ ಬಾಲಕನನ್ನು ಅಪಹರಿಸಿದ್ದ ಆರೋಪಿಗಳು, ಯಶವಂತಪುರಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ಕಾರಿನಲ್ಲಿ ತುಮಕೂರಿಗೆ ಕರೆದುಕೊಂಡು ಹೋಗಿದ್ದರು. ನಿದ್ರೆ ಮಾತ್ರೆ ಬೆರಸಿದ್ದ ತಂಪು ಪಾನೀಯ ಕುಡಿಸಿ ಬಾಲಕನ ಪ್ರಜ್ಞೆ ತಪ್ಪಿಸಿದ್ದರು’ ಎಂದು ತಿಳಿಸಿದರು.

‘ಹಣ ಕೊಡುವ ಸಂಬಂಧಿಕರ ಸೋಗಿನಲ್ಲೇ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಬಹುತೇಕರು ಮಾದಕ ವ್ಯಸನಿಗಳು. ಆರೋಪಿ ಫಾಹೀಂ, ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT