ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಚಿಕಿತ್ಸೆಗೆ ಸಿಬ್ಬಂದಿ ಕೊರತೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅರ್ಧಕ್ಕೂ ಅಧಿಕ ಕಾಯಂ ಸಿಬ್ಬಂದಿ ಹುದ್ದೆ ಖಾಲಿ
ವರುಣ್ ಹೆಗಡೆ
Published 21 ಜನವರಿ 2024, 4:58 IST
Last Updated 21 ಜನವರಿ 2024, 4:58 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಇಲ್ಲಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಸಂಸ್ಥೆಗೆ ಬರುವ ರೋಗಿಗಳಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ. 

ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಸ್ಥೆಗೆ ಸ್ಥಳೀಯ ರೋಗಿಗಳ ಜತೆಗೆ ದೇಶದ ಬೇರೆ ಬೇರೆ ರಾಜ್ಯಗಳು ಹಾಗೂ ವಿದೇಶಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್ಆರ್) ನೆರವಿನಿಂದ ಅತ್ಯಾಧುನಿಕ ಸೌಲಭ್ಯ ಹೊಂದಿದ ಹೊರರೋಗಿ ಘಟಕ (ಒಪಿಡಿ) ಹಾಗೂ ವಿವಿಧ ಚಿಕಿತ್ಸಾ ಘಟಕಗಳು ಸಂಸ್ಥೆಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಗೊಂಡಿವೆ. ಇದರಿಂದಾಗಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದ್ದು, ಪ್ರತಿ ನಿತ್ಯ ಸರಾಸರಿ 1,400 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ, ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ರೋಗಿಗಳ ನಿರ್ವಹಣೆ ಸಂಸ್ಥೆಗೆ ಸವಾಲಾಗಿದೆ. 

ಸಂಸ್ಥೆಗೆ ಮಂಜೂರಾಗಿದ್ದ ಅಧಿಕಾರಿ ಹಾಗೂ ನೌಕರರ ಕಾಯಂ ಹುದ್ದೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಉಳಿದಿವೆ. ಮಂಜೂರಾಗಿದ್ದ 1,767 ಹುದ್ದೆಗಳಲ್ಲಿ 1,109 ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಸಂಸ್ಥೆಗೆ ಮಂಜೂರಾಗಿದ್ದ ಒಟ್ಟು 242 ಗ್ರೂಪ್ ಎ ಹುದ್ದೆಗಳಲ್ಲಿ 138 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 118 ಗ್ರೂಪ್ ಬಿ ಹುದ್ದೆಗಳಲ್ಲಿ 82 ಹುದ್ದೆಗಳು ಖಾಲಿಯಿದ್ದು, 36 ಅಧಿಕಾರಿಗಳು ಮಾತ್ರ ಕಾಯಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸಂಸ್ಥೆಯ ಆಡಳಿತ ಮಂಡಿಳಿಯ ಮೇಲೆ ಪರಿಣಾಮ ಬೀರಿದೆ. 

ಸಿಬ್ಬಂದಿ ಸಮಸ್ಯೆ: ಸಂಸ್ಥೆಗೆ ಮಂಜೂರಾಗಿದ್ದ 1,407 ಕಾಯಂ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ನೌಕರರ ಹುದ್ದೆಗಳಲ್ಲಿ 484 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 1,109 ಗ್ರೂಪ್ ಸಿ ಕಾಯಂ ಹುದ್ದೆಗಳಲ್ಲಿ 684 ಹುದ್ದೆಗಳು ಖಾಲಿ ಉಳಿದಿದ್ದು, 425 ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ, 298 ಗ್ರೂಪ್ ಸಿ ಹುದ್ದೆಗಳಲ್ಲಿ 239 ಹುದ್ದೆಗಳು ಖಾಲಿ ಉಳಿದಿದ್ದು, 59 ನೌಕರರು ಮಾತ್ರ ಕಾಯಂ ಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ.

1973ರಲ್ಲಿ 50 ಹಾಸಿಗೆಗಳೊಂದಿಗೆ ಪ್ರಾರಂಭವಾದ ಸಂಸ್ಥೆ, ಈಗ 871 ಹಾಸಿಗೆಗಳನ್ನು ಒಳಗೊಂಡಿದೆ. ಹಾಸಿಗೆಗಳ ಸಂಖ್ಯೆ ಹೆಚ್ಚಳವಾದರೂ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಒದಗಿಸದಿರುವುದು ಸಂಸ್ಥೆಯ ವೈದ್ಯರು ಹಾಗೂ ನೌಕರರ ಅಸಮಾಧಾನಕ್ಕೆ ಕಾಣವಾಗಿದೆ. 

‘ಸಿಬ್ಬಂದಿ ಕೊರತೆಯಿಂದ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆ ವ್ಯತ್ಯಯವಾಗುತ್ತಿದೆ. ಪೆಟ್‌ ಸ್ಕ್ಯಾನ್‌ ಘಟಕ ಸೇರಿ ವಿವಿಧ ಘಟಕಗಳನ್ನು ತಜ್ಞರಲ್ಲದವರು ನಿರ್ವಹಿಸುತ್ತಿದ್ದಾರೆ. ಪರೀಕ್ಷೆಗಳಿಗೆ ರೋಗಿಗಳು ಇಡೀ ದಿನ ಕಾಯಬೇಕಾದ ಪರಿಸ್ಥಿತಿಯಿದೆ. ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಒದಗಿಸಿದರೆ ಗುಣಮಟ್ಟದ ಚಿಕಿತ್ಸೆ ಸಾಧ್ಯವಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಡಾ‌.ವಿ.ಲೋಕೇಶ್
ಡಾ‌.ವಿ.ಲೋಕೇಶ್

ಅಂಕಿ–ಅಂಶಗಳು 765  ಕಿದ್ವಾಯಿ ಸಂಸ್ಥೆಯಲ್ಲಿನ ಹಾಸಿಗೆಗಳ ಸಂಖ್ಯೆ 106 ಸಂಸ್ಥೆಯಲ್ಲಿನ ಐಸಿಯು ಹಾಸಿಗೆಗಳ ಸಂಖ್ಯೆ

ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆಗೆ ಕ್ರಮವಹಿಸಲಾಗಿದೆ. ವಿವಿಧ ಚಿಕಿತ್ಸಾ ಸೌಲಭ್ಯಗಳು ಸೇರ್ಪಡೆ ಆಗಿರುವುದರಿಂದ ಹೆಚ್ಚುವರಿ ಸಿಬ್ಬಂದಿಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಡಾ.ವಿ.ಲೋಕೇಶ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ವಾರ್ಷಿಕ 3 ಲಕ್ಷ ಮಂದಿಗೆ ಚಿಕಿತ್ಸೆ ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಬಾಯಿ ಜಠರ ಸ್ತನ ಅನ್ನನಾಳ ಸೇರಿ ವಿವಿಧ ಪ್ರಕಾರಗಳ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಗೆ ಚಿಕಿತ್ಸೆ ಸಂಬಂಧ ದಾಖಲಾಗಿದ್ದವರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3294 ಮಂದಿ ಮೃತಪಟ್ಟಿದ್ದಾರೆ. ತಡವಾಗಿ ಆಸ್ಪತ್ರೆಗೆ ದಾಖಲು ಚಿಕಿತ್ಸೆ ವಿಳಂಬ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪೀಡಿತರಲ್ಲಿ ಕೆಲವರ ಜೀವಕ್ಕೆ ಅಪಾಯವಾಗುತ್ತಿದೆ. ಸಂಸ್ಥೆಯ ದಾಖಲಾತಿ ಪ್ರಕಾರ ಶೇ 50 ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3 ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT