ಭಾನುವಾರ, ಜನವರಿ 24, 2021
28 °C
ಗಾಳಿಪಟ ಹಾರಾಟ ಗಣನೀಯ ಹೆಚ್ಚಳ * ಹಕ್ಕಿಗಳ ಕತ್ತು ಕೊಯ್ಯುತ್ತಿದೆ ‘ಹದ್ದಿನ ಕಣ್ಣಿ’ಗೂ ಕಾಣದ ಮಾಂಜಾ ನೂಲು

ಬಾನಾಡಿಗಳ ಬಾಳಿನಲ್ಲೂ ಗೋಳು ತಂದಿಟ್ಟ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಕಾಣಿಸಿಕೊಂಡ ಬಳಿಕ ನಗರದಲ್ಲಿ ಗಾಳಿಪಟ ಹಾರಿಸುವ ಪರಿಪಾಠ ಗಣನೀಯವಾಗಿ ಹೆಚ್ಚಾಗಿದೆ. ಗಾಳಿಪಟ ಹಾರಾಟಕ್ಕೆ ಬಳಸುವ ಮಾಂಜಾ ನೂಲು ಪಕ್ಷಿಗಳನ್ನು ಆಪತ್ತಿಗೆ ನೂಕುತ್ತಿದೆ. 2019ನೇ ಸಾಲಿಗೆ ಹೋಲಿಸಿದರೆ 2020ರಲ್ಲಿ ಮಾಂಜಾ ದಾರದಿಂದ ಗಾಯಗೊಂಡ ಪಕ್ಷಿಗಳ ಸಂಖ್ಯೆ ದುಪ್ಪಟ್ಟಾಗಿದೆ.

‘ನಗರದ ಪೀಪಲ್‌ ಫಾರ್‌ ಅನಿಮಲ್ಸ್‌ (ಪಿಎಫ್‌ಎ) ಮತ್ತು ಪ್ರಾಣಿಗಳ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಗಳ (ಎಆರ್‌ಆರ್‌ಸಿ) ಅಂಕಿ–ಅಂಶಗಳ ಪ್ರಕಾರ 2019ರಲ್ಲಿ ನಗರದಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡ 606 ಪಕ್ಷಿಗಳನ್ನು ಸ್ವಯಂಸೇವಕರು ರಕ್ಷಿಸಿದ್ದರು. 2020ರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 1,240 ಪಕ್ಷಿಗಳು ಪತ್ತೆಯಾಗಿವೆ. 2021ರಲ್ಲಿ ಹತ್ತೇ ದಿನಗಳಲ್ಲಿ 75 ಹಕ್ಕಿಗಳನ್ನು ನಗರದಲ್ಲಿ ರಕ್ಷಿಸಲಾಗಿದೆ. ಜನರ ಮನರಂಜನೆಯು ಪಕ್ಷಿಗಳ ಪ್ರಾಣಕ್ಕೆ ಕುತ್ತು ತರುತ್ತಿರುವುದು ನಿಜಕ್ಕೂ ಆತಂಕಕಾರಿ’ ಎನ್ನುತ್ತಾರೆ ಪ್ರಾಣಿಗಳ ಅರಿವು ಸಂಶೋಧಕ ಯೋಗಾನಂದ ಚಂದ್ರಯ್ಯ. 

ಹತ್ತಿಯ ದಾರ ಬಳಸಿ ಗಾಳಿಪಟ ಹಾರಿಸುವುದರಿಂದ ಪಕ್ಷಿಗಳಿಗೆ ಅಷ್ಟೇನೂ ಹಾನಿ ಉಂಟಾಗದು. ಆದರೆ, ಗಾಳಿಪಟ ಹಾರಿಸಲು ಮಾಂಜಾ ದಾರವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕೆಲವರು ಬೇರೆಯವರ ಗಾಳಿಪಟದ ದಾರವನ್ನು ಕತ್ತರಿಸುವ ಉದ್ದೇಶದಿಂದ ಮಾಂಜಾ ದಾರಕ್ಕೆ ಗಾಜಿನ ಪುಡಿಯನ್ನು ಲೇಪಿಸುತ್ತಾರೆ. ಇಂತಹ ದಾರಗಳು ಬಾನಾಡಿಗಳ ಬದುಕನ್ನೇ ಕಸಿಯುತ್ತಿವೆ.

ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದಾಗ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಆದಿಯಾಗಿ ಬೇರೆ ಬೇರೆ ಉದ್ಯೋಗದಲ್ಲಿವರೂ ಮನೆಯಲ್ಲೇ ಕಾಲ ಕಳೆಯಬೇಕಾಯಿತು. ಅವರೆಲ್ಲ ಮನೆಯ ಟೆರೇಸ್‌ನಲ್ಲಿ ಗಾಳಿಪಟ ಹಾರಿಸುತ್ತಾ ಕಾಲ ಕಳೆದರು. ಗಾಳಿಪಟ ಗೋತಾ ಹೊಡೆದು ದಾರ ಕೈತಪ್ಪಿದರೆ, ಅದು, ಇನ್ನೆಲ್ಲೋ ಹೋಗಿ ಮರಗಿಡಗಳ ರೆಂಬೆ ಕೊಂಬೆಗಳಿಗೆ ಸಿಲುಕಿಕೊಳ್ಳುತ್ತದೆ. ಕಟ್ಟಡಗಳು, ವಿದ್ಯುತ್‌ ಕಂಬಗಳಲ್ಲಿ ಜೋತು ಬೀಳುತ್ತದೆ. ಈ ದಾರ ಅಲ್ಲಿದ್ದಷ್ಟೂ ದಿನಗಳೂ ಹಕ್ಕಿಗಳಿಗೆ ಹಾಗೂ ಮರದಲ್ಲಿ ಆಶ್ರಯ ಪಡೆಯುವ ಸಣ್ಣ ಪ್ರಾಣಿಗಳಿಗೆ ಆಪತ್ತು ತಪ್ಪಿದ್ದಲ್ಲ.

‘ಕಾಗೆ, ಗೂಬೆ, ಹದ್ದು, ಗರುಡದಂತಹ ಬೇಟೆಗಾರ ಪಕ್ಷಿಗಳು ಮಾಂಜಾ ನೂಲಿನಿಂದ ಆಪತ್ತಿಗೆ ಸಿಲುಕುವ ಸಾಧ್ಯತೆ ಹೆಚ್ಚು. ಅವು ಬೇಟೆಯನ್ನು ಕಂಡಾಗ ಶರವೇಗದಲ್ಲಿ ಆಗಸದಿಂದ ಕೆಳಕ್ಕಿಳಿಯುತ್ತವೆ. ಹದ್ದಿನ ಕಣ್ಣಿಗೂ ಕಾಣದಷ್ಟು ಸಣ್ಣದಾಗಿರುವ ಮಾಂಜಾ ದಾರವು ವೇಗವಾಗಿ ಹಾರುವ ಹಕ್ಕಿಗಳ ರೆಕ್ಕೆಗಳನ್ನೂ ತುಂಡುಮಾಡುವಷ್ಟು ಬಲಿಷ್ಠವಾಗಿರುತ್ತದೆ. ಗದ್ದೆ, ಬಯಲುಗಳಲ್ಲಿ ವಾಸಿಸುವ ಕೊಕ್ಕರೆ ಮತ್ತು ಪೆಲಿಕಾನ್‌ನಂತಹ ಹಕ್ಕಿಗಳಿಗೂ ಇವು ಹಾನಿಯುಂಟು ಮಾಡುತ್ತವೆ’ ಎಂದು ಯೋಗಾನಂದ ವಿವರಿಸಿದರು.

ಮಾಂಜಾ ದಾರದಿಂದ ಪರಿಸರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರಿತು ರಾಷ್ರ್ಟೀಯ ಹಸಿರು ನ್ಯಾಯಮಂಡಳಿ ಇವುಗಳ ಮಾರಾಟ ನಿಷೇಧಿಸಿ ಆದೇಶ ಮಾಡಿದೆ. ಆದರೆ ಅದರ ಅನುಷ್ಠಾನಕ್ಕೆ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿಲ್ಲ. ಮಾರುಕಟ್ಟೆಯಲ್ಲಿ ಈ ದಾರ ಈಗಲೂ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ದಾರ ಪಕ್ಕನೆ ತುಂಡಾಗುವುದಿಲ್ಲ. ಹಾಗಾಗಿ ಗಾಳಿಪಟ ಹಾರಿಸುವವರು ಈ ದಾರವನ್ನೇ ಖರೀದಿಸುತ್ತಾರೆ.

‘ಮಾಂಜಾ ದಾರ ಮಾರಾಟ ಮಾಡುವ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ, ಅವುಗಳನ್ನು ವಶಕ್ಕೆ ಪಡೆಯಬೇಕು. ಈ ನಿಷೇಧಿತ ದಾರಗಳನ್ನು ಮಾರಾಟ ಮಾಡುವ ವರ್ತಕರಿಗೆ ದುಬಾರಿ ದಂಡ ವಿಧಿಸಬೇಕು. ಈ ದಾರ ಬಳಸಿ ಗಾಳಿಪಟ ಹಾರಿಸುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು’ ಎಂದು ಯೋಗಾನಂದ ಒತ್ತಾಯಿಸಿದರು. 

‘ಉತ್ತರ ಭಾರತದಲ್ಲಿ ಗಾಳಿಪಟ ಹಾರಿಸುವವರ ಸಂಖ್ಯೆ ಇಲ್ಲಿಗಿಂತಲೂ ಹೆಚ್ಚು. ಗುಜರಾತಿನ ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅಹಮದಾಬಾದ್ ನಗರದಲ್ಲಿ 2019ರಲ್ಲಿ 10 ದಿನಗಳಲ್ಲೇ ಬರೊಬ್ಬರಿ 5,730 ಪಕ್ಷಿಗಳು ಮಾಂಜಾ ನೂಲಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದವು’ ಎಂದು ಯೋಗಾನಂದ ಮಾಹಿತಿ ನೀಡಿದರು.

ನಗರದ ಪೀಪಲ್‌ ಫಾರ್‌ ಅನಿಮಲ್ಸ್‌ (ಪಿಎಫ್‌ಎ) ಮತ್ತು ಪ್ರಾಣಿಗಳ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಗಳ (ಎಆರ್‌ಆರ್‌ಸಿ)ಸ್ವಯಂಸೇವಕರು ಗಾಯಗೊಂಡ ಹಕ್ಕಿಗಳ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಯೋಗಾನಂದ.

‘ಬಾನಾಡಿಗಳ ಬದುಕು ಕಸಿಯದಿರಲಿ ಸಂಕ್ರಾಂತಿ ಸಡಗರ’
‘ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಕೆಲವೆಡೆ ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನೂ ಈ ಹಬ್ಬದ ಸಂದರ್ಭದಲ್ಲಿ ಏರ್ಪಡಿಸಲಾಗುತ್ತದೆ. ನಗರದಲ್ಲೂ ವಲಸೆ ಬಂದ ಅನೇಕ ಕುಟುಂಬಗಳು ಸಂಕ್ರಾಂತಿಯ ದಿನ ಗಾಳಿಪಟ ಹಾರಾಟದಲ್ಲಿ ತೊಡಗುತ್ತವೆ. ‘ರೈತರು ಪರಿಶ್ರಮದಿಂದ ಬೆಳೆದ ಫಸಲನ್ನು ಪೂಜಿಸುವ ಸುಗ್ಗಿ–ಸಿರಿ ಹಬ್ಬವು ಪಶು–ಪಕ್ಷಿಗಳನ್ನು ಪೂಜಿಸಿ ಗೌರವಿಸುವುದರ ಸಂಕೇತವೂ ಆಗಿದೆ. ಜನ ಈ ಹಬ್ಬದ ಹಿಂದಿರುವ ಆಶಯ ಅರಿತು ಆಚರಿಸಬೇಕು. ಹಬ್ಬದ ಸಡಗರ ಹಕ್ಕಿಗಳ ಪಾಲಿಕೆ ಕಂಟಕಪ್ರಾಯ ಆಗಬಾರದು’ ಎಂದು ಯೋಗಾನಂದ ತಿಳಿಸಿದರು.

‘ಮಾಂಜಾ ಮನುಷ್ಯರಿಗೂ ಕಂಟಕ‘
ಮಾಂಜಾ ದಾರಗಳು ಕೇವಲ ಪ್ರಾಣಿಗಳ ಜೊತೆ ಮಾನವರ ಜೀವಕ್ಕೂ ಕಂಟಕ ತರಬಲ್ಲವು. ಮರಗಳಲ್ಲಿ ಸಿಲುಕಿಕೊಳ್ಳುವ ಮಾಂಜಾ ನೂಲು ದ್ವಿಚಕ್ರ ವಾಹನ ಸವಾರರಿಗೆ ಅಪಾಯವನ್ನುಂಟು ಮಾಡುತ್ತವೆ. ‘2019ರ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ಕತ್ತಿಗೆ ಮಾಂಜಾ ದಾರ ಸಿಲುಕಿ ದ್ವಿಚಕ್ರ ವಾಹನ ಸವಾರರೊಬ್ಬರು ಸ್ಧಳದಲ್ಲೇ ಮೃತಪಟ್ಟಿದ್ದರು. 2019ರ ಜುಲೈನಲ್ಲಿ ನವದೆಹಲಿಯಲ್ಲಿ ವ್ಯಕ್ತಿಯೊಬ್ಬರು ಮೂರು ವರ್ಷದ ಮಗುವಿನ ಜೊತೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ಕತ್ತಿಗೆ ಮಾಂಜಾ ದಾರ ಸಿಲುಕಿತ್ತು. ಬೈಕ್‌ ನಿಯಂತ್ರಣ ಕಳೆದುಕೂಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು’ ಎಂದು ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್ (ಐಯುಸಿಎನ್‌) ಸಂಸ್ಥೆಯ ಸದಸ್ಯರೂ ಆಗಿರುವ ಯೋಗಾನಂದ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು