ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅದ್ಧೂರಿ ಕಿತ್ತೂರು ಉತ್ಸವ: ಕ್ರಾಂತಿನೆಲದ ಸ್ವಾಭಿಮಾನ ಎತ್ತಿಹಿಡಿದ ಮೆರವಣಿಗೆ

ರಾಣಿ ಚನ್ನಮ್ಮನ ನಾಡಲ್ಲಿ ಅದ್ಧೂರಿ ಕಿತ್ತೂರು ಉತ್ಸವ, ನಾಂದಿ ಹಾಡಿದ ಜಾನಪದ ಕಲಾಮೇಳ, ಜನಪ್ರತಿನಿಧಿಗಳಿಲ್ಲದೆ ಜನರೇ ಗೆಲ್ಲಿಸಿದ ಮೆರವಣಿಗೆ
ಫಾಲೋ ಮಾಡಿ
Comments

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಆ ಕಡೆ ವೀರಜ್ಯೋತಿಗೆ ಸ್ವಾಗತ, ಈ ಕಡೆ ವಿಜಯ ಉತ್ಸವಕ್ಕೆ ಚಾಲನೆ, ನಾಡಿನ ವಿವಿಧೆಡೆಯಿಂದ ಹರಿದುಬಂದ ಜನಸಾಗರ, ಹೃಣ್ಮನ ಸೆಳೆಯುವಂಥ ವೇಷಭೂಷಣ, ಸಿಳ್ಳೆ ಚಪ್ಪಾಳೆ ಕೇಕೆಗಳ ಮಧ್ಯೆ ಹೆಜ್ಜೆ ಹಾಕಿದ ಕಲಾತಂಡಗಳು, ದಢಂದಢಕ್‌ ದಢಂದಢಕ್ ದೇಸಿವಾದ್ಯಗಳ ಸದ್ದು...

ರಾಣಿ ಚನ್ನಮ್ಮನ ಕರ್ಮಭೂಮಿ, ಕ್ರಾಂತಿಯ ನೆಲದಲ್ಲಿ ಕಿತ್ತೂರು ಉತ್ಸವದ ಅಂಗವಾಗಿ ಸೋಮವಾರ ನಡೆದ ಜಾನಪದ ಕಲಾವಾಹಿನಿಗೆ ಜನಸಾಗರವೇ ಹರಿದುಬಂತು. ಬ್ಯಾಂಡ್‌ನವರು, ತಾಸೆದವರು, ಗೆಜ್ಜೆಮೇಳದವರು, ಹುಲಿವೇಷದವರು, ಗೊಂಬೆಕುಣಿತದವರು, ಭಜನೆಯವರು... ಒಂದೇ ಎರಡೇ! ನಾಲ್ಕು ಕಿ.ಮೀ ದೂರದವರೆಗೆ ನಡೆದ ಅದ್ಧೂರಿ ಮೆರವಣಿಗೆ ಕಿತ್ತೂರು ಕರ್ನಾಟಕದ ಅಭಿಮಾನ, ಸ್ವಾಭಿಮಾನಕ್ಕೆ ಕನ್ನಡಿ ಹಿಡಿಯಿತು.

1824ರ ಅಕ್ಟೋಬರ್‌ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್‌ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದರಿಂದ ವೈಭವ ಇಮ್ಮಡಿಗೊಂಡಿತು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ ರಾಣಿ ಚನ್ನಮ್ಮನ ಪುತ್ಥಳಿ ಆವರಣದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಕಿತ್ತೂರು ಸಂಸ್ಥಾನದ ನಂದಿಧ್ವಜ ಆರೋಹಣ ಮಾಡಿದರು. ಅಲ್ಲಿಂದ ಆರಂಭವಾದ ಮೆರವಣಿಗೆ ನಿಚ್ಚಣಕಿವರೆಗೆ ನಡೆಯಿತು.

ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನ ವರ್ಣರಂಜಿತ ವೈಭೋಗ ಕಣ್ತುಂಬಿಕೊಂಡರು. ಪೌರಾಣಿಕ ವೇಷಧಾರಿಗಳ ಜತೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನೆತ್ತಿ ಮೇಲೆ ಬಂದ ಸೂರ್ಯನ ಪ್ರಖರತೆಯನ್ನೂ ಲೆಕ್ಕಿಸದೇ ಕಲಾವಿದರು ಹೆಜ್ಜೆ ಹಾಕಿದರು.

ಸ್ವಾತಂತ್ರ್ಯದ ಕಿಡಿ ರಾಣಿ ಚನ್ನಮ್ಮನಿಗೆ ಜಯವಾಗಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ, ಅಮಟೂರ ಬಾಳಪ್ಪನವರು ಅಮರವಾಗಲಿ... ಎಂಬ ಘೋಷಣೆಗಳು ಮೊಳಗಿದವು. 60 ಕಲಾವಿದರ ತಂಡಗಳು, 10 ಸ್ತಬ್ಧಚಿತ್ರಗಳು ಒಂದರ ಹಿಂದೊಂದು ಸಾಗಿದವು.

ಮೋಹನಕುಮಾರ ಸಂಗಡಿಗರ ಗಾರುಡಿ ಗೊಂಬೆ, ನಾಗರಾಜ ಸಂಗಡಿಗರ ಕೀಲುಕುದುರೆ, ಸುಮಿತ್ರಾ ಮುಂದಾಳತ್ವದ ಮಹಿಳಾ ಡೊಳ್ಳುಕುಣಿತ, ಸತೀಶಕುಮಾರ ಹಾಗೂ ಸಂಗಡಿಗರ ಕೋಳಿನೃತ್ಯ, ಮುತ್ತುರಾಜ ನೇತೃತ್ವದ ಗೊರವರ ಕುಣಿತ, ಮಾನಶ್ರೀ ತಂಡದ ಪಟಾಕುಣಿತ, ಬಸಯ್ಯ ಬನ್ನಿಗೋಳಮಠ ತಂಡದ ಕಥಕ್ಕಳಿ, ವೀರಗಾಸೆ, ಮಹಾರುದ್ರಪ್ಪ ಇಟಗಿ ಅವರ ತಂಡದ ದೊಡ್ಡಸಂಬಾಳ ಮೇಳ, ನಿಶಾ ತಂಡದ ಮಹಿಳೆಯರ ನಗಾರಿ, ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡೆಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಶಿವಕುಮಾರ ನೇತೃತ್ವದ ಚಿಟ್ಟಿಮೇಳದವರು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸಿದರು. ಜನಪದ ಗೀತೆ ಗಾಯಕರ ತಂಡದವರು ಕಿತ್ತೂರಿನ ರಾಜವೈಭವ ಹಾಡಿ, ಹೊಗಳಿದರು.

ಇವರ ಮುಂದೆ ಪೂರ್ಣಕುಂಭ ಕಳಶ ಹೊತ್ತ 501 ಮಹಿಳೆಯರು ಬರಿಗಾಲಲ್ಲಿ ಹೆಜ್ಜೆ ಹಾಕಿದರು, ಯುವತಿಯರ ತಂಡಗಳೂ ಬಣ್ಣಬಣ್ಣದ ಸೀರೆಗಳನ್ನು ಉಟ್ಟು ನಲಿದರು. ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಶಿಸ್ತಿನ ನಡೆ ತೋರಿದರು. ಎಲ್ಲ ತಂಡಗಳ ಹಿಂದೆ ನಾಲ್ಕು ಕುದುರೆ, ಒಂದು ಸಾರೋಟ ಸಾಗಿತು. ಕೊನೆಗೆ ಆನೆ ಚಮ್ಮಮ್ಮನ ಚಿತ್ರ ಹೊತ್ತು ಸಾಗಿತು. ಮಾರ್ಗಮಧ್ಯೆ ಜನರು ಆನೆಗೆ ಕಬ್ಬು, ಬೆಲ್ಲ ತಿನ್ನಲು ಕೊಟ್ಟು ಖುಷಿಪಟ್ಟರು.

ಉದ್ಘಾಟನೆಗೆ ಬಾರದ ಸಚಿವ

ಪೂರ್ವ ನಿಗದಿಯಂತೆ ಅ.23ರಂದು ಉತ್ಸವದ ಮೆರವಣಿಗೆ ನಡೆಯಬೇಕಿತ್ತು. ಶಾಸಕ ಆನಂದ ಮಾಮನಿ ಅವರ ಅಗಲಿಕೆಯ ಕಾರಣ, ಸೋಮವಾರಕ್ಕೆ ಮುಂದೂಡಲಾಗಿತ್ತು. ಮೆರವಣಿಗೆ ಉದ್ಘಾಟನೆ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರೇ ಬರಲಿಲ್ಲ. ಕಿತ್ತೂರು ಶಾಸಕರ ಹೊರತಾಗಿ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಸುಳಿಯಲಿಲ್ಲ.

ಜನರೇ ಮುಂದಾಗಿ ಉತ್ಸವದ ಮೆರವಣಿಗೆಯನ್ನು ಗೆಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT