ಮಂಗಳವಾರ, ಜೂನ್ 22, 2021
28 °C

₹15 ಸಾವಿರ ಕೋಟಿ ನೆರವು: ಪ್ರಧಾನಿಗೆ ಕೆಎಂಎಫ್‌ ಕೃತಜ್ಞತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಲು ಉತ್ಪಾದಕರ ಸಂಘ, ಡೇರಿ ಹಾಗೂ ಹೈನುಗಾರಿಕೆಯ ಘಟಕಗಳ ಮೂಲಸೌಲಭ್ಯ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್‌) ಕೃತಜ್ಞತೆ ಸಲ್ಲಿಸಿದೆ. 

‘ಕೋವಿಡ್-19 ರಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಕುಸಿದಿರುವ ಕಾರಣ ಹಾಲಿನ ಪುಡಿ,
ಬೆಣ್ಣೆ, ತುಪ್ಪ ಮುಂತಾದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಾಗಿ ಹದಗೆಡುವ ಅಪಾಯವಿದೆ. ಇದರಿಂದಾಗಿ ಈ ವಲಯವು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇತ್ತು. ಇದನ್ನು ಅರಿತು ಕೂಡಲೇ ನೆರವು ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ವಂದನೆಗಳು’ ಎಂದು ಕೆಎಂಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ. 

‘ಬ್ಯಾಂಕ್‍ಗಳ ಮೂಲಕ ದುಡಿಯುವ ಬಂಡವಾಳವನ್ನು ಸಾಲವನ್ನಾಗಿ ಪಡೆಯಲು ಹಾಗೂ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 2ರಿಂದ ಶೇ 4ರಷ್ಟನ್ನು ಕೇಂದ್ರ ಸರ್ಕಾರದಿಂದ ಭರಿಸಲು, ಕೇಂದ್ರ ಸರ್ಕಾರವು ಒಟ್ಟು ₹100 ಕೋಟಿಗಳನ್ನು ಕಾಯ್ದಿರಿಸಿದೆ. ಇದರಿಂದ ರಾಜ್ಯದ ರೈತರಿಗೂ ಅನುಕೂಲವಾಗಲಿದೆ’ ಎಂದು ಅದು ಹೇಳಿದೆ. 

‘ಹಾಲು ಉತ್ಪಾದಕರಿಗೆ ಅಚಲ ಹಾಗೂ ನಿರಂತರವಾದ ಮಾರುಕಟ್ಟೆಯನ್ನು ಒದಗಿಸಲು, ಹಾಲು ಉತ್ಪಾದಿಸುವ ರೈತರಿಗೆ ಸಕಾಲದಲ್ಲಿ ಹಣ ಬಟವಾಡೆ ಮಾಡಲು, ಹಾಲು ಉತ್ಪನ್ನಗಳಿಗೆ ಉತ್ತಮ ದರ ದೊರಕಿಸಿ ಕೊಡಲು ಹಾಗೂ ಡೇರಿ ಉದ್ಯಮದ ಕಾರ್ಯ ಚಟುವಟಿಕೆಯನ್ನು ಯಾವುದೇ ಆಡಚಣೆಯಿಲ್ಲದೆ ನಿರ್ವಹಣೆ ಮಾಡಲು ಈ ಅನುದಾನದಿಂದ ಸಾಧ್ಯವಾಗಲಿದೆ’ ಎಂದು ಕೆಎಂಎಫ್‌ ಹೇಳಿದೆ. 

‘ಜಾನುವಾರು ಲಸಿಕಾ ಕಾರ್ಯಕ್ರಮಕ್ಕೆ ₹13,343 ಕೋಟಿ ಘೋಷಣೆ ಮಾಡಿರುವುದೂ ಸ್ವಾಗತಾರ್ಹ ಕ್ರಮ’ ಎಂದು ಮಹಾಮಂಡಲ ಹೇಳಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು