ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇಹಳ್ಳಿ, ಕನ್ನಲ್ಲಿ ಕೆರೆಗಳು ಕಲುಷಿತ: ತ್ಯಾಜ್ಯ ನೀರಿನಿಂದ ದುರ್ವಾಸನೆ

ಹೋರಾಟದ ಪ್ರತಿಫಲ: ಕಲ್ಮಶ ತಡೆಗೆ ಎಸ್‌ಟಿಪಿ
Last Updated 11 ಜನವರಿ 2023, 20:23 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸ್ಥಳೀಯರ ಆಗ್ರಹಕ್ಕೆ ಕೊನೆಗೂ ಮಣಿದಿರುವ ಜಲಮಂಡಳಿ ಹಾಗೂ ಬಿಬಿಎಂಪಿ ಕೊಡಿಗೇಹಳ್ಳಿ ಹಾಗೂ ಕನ್ನಲ್ಲಿ ಕೆರೆಗೆ ಕಲ್ಮಶ ಹರಿಯದಂತೆ ತಡೆಯಲು ಎಸ್‌ಟಿಪಿ ಸ್ಥಾಪಿಸಲು ಮುಂದಾಗಿವೆ.

ಸರ್‌ ಎಂ. ವಿಶ್ವೇಶ್ವರಯ್ಯ ಬಿಡಿಎ ಬಡಾವಣೆಗೆ ಹೊಂದಿಕೊಂಡಂತಿರುವ ಕೊಡಿಗೇಹಳ್ಳಿ ಹಾಗೂ ಕನ್ನಲ್ಲಿ ಕೆರೆಗಳು ಬಿಬಿಎಂಪಿಯ ಸುಪರ್ದಿಯಲ್ಲಿವೆ. ಈ ಕೆರೆಗಳಿಗೆ ಹೇರೋಹಳ್ಳಿ, ಬ್ಯಾಡರಹಳ್ಳಿ, ದೊಡ್ಡಗೊಲ್ಲರಹಟ್ಟಿ, ಬಾಲಾಜಿ ಬಡಾವಣೆ, ಅಂಜನಾನಗರ ಮತ್ತು ಬಿಇಎಲ್‌ ಲೇಔಟ್‌ನಿಂದ ಕೊಳಚೆ ನೀರು ಹಾಗೂ ತ್ಯಾಜ್ಯ ಸೇರಿಕೊಳ್ಳುತ್ತಿದೆ. ಇದನ್ನು ತಡೆಯಬೇಕು ಎಂದು ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಜಲಮಂಡಳಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು.

ಕೊಡಿಗೇಹಳ್ಳಿ ಹಾಗೂ ಕನ್ನಲ್ಲಿ ಕೆರೆಗಳು ದುರ್ವಾಸನೆ ಬೀರುತ್ತಿದ್ದು, ಆಸುಪಾಸಿನ ನಿವಾಸಿಗಳಿಗೆ ತೊಂದರೆಯಾಗಿದೆ. ಕಲುಷಿತ ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು, ಸೊಳ್ಳೆ, ಕ್ರಿಮಿಕೀಟಗಳು ಹೆಚ್ಚಾಗಿವೆ. ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳ ನೀರೂ ಕಲುಷಿತಗೊಳ್ಳುತ್ತಿದೆ. ಕೊಮ್ಮಘಟ್ಟ, ರಾಮಸಂದ್ರ ಕೆರೆಗಳೂ ಕಲುಷಿತಗೊಳ್ಳುತ್ತಿದ್ದು, ಇಲ್ಲಿನ ರಾಸಾಯನಿಕ ಬೈರಮಂಗಲ ಕೆರೆಗೆ ಸೇರುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಲಮಂಡಳಿಗೆ ಪದೇ ಪದೇ ಪತ್ರ ಬರೆದು ಕೋರಿಕೊಳ್ಳಲಾಗಿತ್ತು. ಇದೀಗ ಅದಕ್ಕೆ ಸ್ಪಂದನೆ ಸಿಕ್ಕಿದ್ದು, ಜಲಮಂಡಳಿ 3 ದಶಲಕ್ಷ ಲೀಟರ್‌ ಸಂಸ್ಕರಣೆ ಸಾಮರ್ಥ್ಯದ ಎಸ್‌ಟಿಪಿಯನ್ನು ಅಳವಡಿಸಲು ಮುಂದಾಗಿದೆ.

‘ಜಲಮಂಡಳಿ ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ವ್ಯವಸ್ಥೆ ಮಾಡಿದೆ. ಕೊಡಿಗೇಹಳ್ಳಿ ಹಾಗೂ ಕನ್ನಲ್ಲಿ ಕೆರೆಗಳಿಗೆ ಹೆಚ್ಚಿನ ಕಲ್ಮಶ ಬರುತ್ತಿದ್ದು, ತಡೆಯುವಂತೆ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯರು ಕೋರಿದ್ದರು. ಹೀಗಾಗಿ, ಎಸ್‌ಟಿಪಿಯನ್ನು ನಿರ್ಮಿಸಲು ಜಲಮಂಡಳಿ ಮುಂದಾಗಿದೆ. ಒಂದೂವರೆ ಎಕರೆ ಪ್ರದೇಶದಲ್ಲಿ ಘಟಕವನ್ನು ನಿರ್ಮಿಸಿ, ಈ ಕೆರೆಗಳಿಗೆ ಸಂಸ್ಕರಿತ ನೀರು ಮಾತ್ರ ಹರಿಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಲಮಂಡಳಿಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಎನ್‌.ರಾಜೀವ್‌ ತಿಳಿಸಿದರು.

‘ಕಾವೇರಿ 5ನೇ ಹಂತದ ಯೋಜನೆ ಅಡಿಯಲ್ಲಿ ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ₹10 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ ಸ್ಥಾಪಿಸಲಾಗುತ್ತದೆ. ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದರು.

‘ಕೊಡಿಗೇಹಳ್ಳಿ ಹಾಗೂ ಕನ್ನಲ್ಲಿ ಕೆರೆಗಳನ್ನು ಸದ್ಯಕ್ಕೆ ಬಿಬಿಎಂಪಿ ಅಭಿವೃದ್ಧಿಗೆ ತೆಗೆದುಕೊಂಡಿಲ್ಲ. ಆದರೂ ಕೊಳಚೆ ನೀರು ಹರಿಯದಂತೆ ಜಲಮಂಡಳಿ ಕೈಗೊಂಡಿರುವ ಕಾಮಗಾರಿಗೆ ಬೆಂಬಲವಾಗಿ ನಿಂತಿದೆ’ ಎಂದು ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ಅವರು ಹೇಳಿದರು.

ಕನ್ನಲ್ಲಿ ಕೆರೆಗೆ ಕಟ್ಟಡ ನಿರ್ಮಾಣ ತ್ಯಾಜ್ಯ
ಕನ್ನಲ್ಲಿ ಕೆರೆಗೆ ಕಟ್ಟಡ ನಿರ್ಮಾಣದ ಅವಶೇಷ, ಘನತ್ಯಾಜ್ಯ, ಮಾಂಸ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ ಎಂದು ಪರಿಸರ ಕಾರ್ಯಕರ್ತ ಗೌಡಯ್ಯ ಅವರು ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಒಂದು ವರ್ಷದಿಂದ ಹಲವು ಪತ್ರ ಬರೆದಿದ್ದಾರೆ.

ಇದಕ್ಕೆ ಸ್ಪಂದಿಸಿದ್ದ, ಬಿಬಿಎಂಪಿ ಇಂತಹ ತ್ಯಾಜ್ಯ ಕೆರೆಗೆ ಹೋಗದಂತೆ ಕ್ರಮ ಕೈಗೊಳ್ಳಲು ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಿತ್ತು. ಆದರೆ ಈವರೆಗೆ ಯಾವುದೇ ಕ್ರಮವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ತಪಾಸಣೆ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗೌಡಯ್ಯ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT