ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೆಹಳ್ಳಿ: ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಕೆಗೆ ನಿರ್ದೇಶನ

ಕೊಡಿಗೆಹಳ್ಳಿ: ಸರ್ಕಾರಿ ಜಾಗ ಒತ್ತುವರಿ
Last Updated 27 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿನ ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿದೆ.

‘ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ‌ಕೋರಿ ಕೊಡಿಗೆಹಳ್ಳಿಯ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಇದು ಈತನಕ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಕಟ್ಟಡ ರಾತ್ರೋರಾತ್ರಿ ನಿರ್ಮಾಣವಾಯಿತೇ? ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಆಗ ಜಾಗ ಅಥವಾ ನಿವೇಶನದ ಕುರಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುವುದಿಲ್ಲವೇ? ನಗರದಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸುವುದಿಲ್ಲವೇ? ಅಧಿಕಾರಿಗಳು ಕಚೇರಿಯಲ್ಲಿ ಮೂಕ ಪ್ರೇಕ್ಷರಾಗಿಯೇ ಕುಳಿತಿರುತ್ತಾರೆಯೇ’ ಎಂದು ಪ್ರಶ್ನೆಗಳ ಮಳೆಗರೆಯಿತು.

‘ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಎನ್‌ಟಿಐ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ವಸತಿ ಕಟ್ಟಡ ನಿರ್ಮಿಸಿದೆ. ಬಿಬಿಎಂಪಿ ಅಧಿಕಾರಿಗಳೇ ಇದಕ್ಕೆ ನಕ್ಷೆ ಮಂಜೂರು ಮಾಡಿದ್ದಾರೆ ಎಂಬುದು ಆಶ್ಚರ್ಯ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದ್ದು, ಇದು ಅಧಿಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರಿ ಪ್ರಾಧಿಕಾರಿಗಳ ನಡುವೆ ಸೂಕ್ತ ಹೊಂದಾಣಿಕೆ ಇಲ್ಲದಿರುವುದರ ಪ್ರತಿಬಿಂಬ’ ಎಂದು ಕಿಡಿಕಾರಿತು.

‘ಬೆಂಗಳೂರು ನಗರ ಜಿಲ್ಲಾಧಿಕಾರಿಯು ನಕ್ಷೆ ಮಂಜೂ ರಾತಿ ನೀಡಿರುವ ಅಧಿಕಾರಿಗಳ ವಿಚಾರಣೆ ನಡೆಸಬೇಕು. ತಪ್ಪು ಎಸಗಿರುವುದು ಯಾರು ಎಂಬುದನ್ನು ಪತ್ತೆಹಚ್ಚಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಇದೇ ವೇಳೆ ಯಲಹಂಕ ತಹಶೀಲ್ದಾರ್‌ ನ್ಯಾಯಪೀಠಕ್ಕೆ ವರದಿ ಸಲ್ಲಿಸಿ, ‘ಒತ್ತುವರಿ ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಿದ್ದು, ಕೆಲ ಒತ್ತುವರಿಯನ್ನು ಈಗಾಗಲೇ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಒತ್ತುವರಿದಾರರ ಅಹವಾಲು ಆಲಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಬೇಕು’ ಎಂದು ತಹಶೀಲ್ದಾರ್ ಅವರಿಗೆ ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT