ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳದ ಮಠ ಶಾಂತವೀರ ಸ್ವಾಮೀಜಿ ಸಾವಿನ ಬಗ್ಗೆ ಸಂಶಯ; ತನಿಖೆಗೆ ಒತ್ತಾಯ

Last Updated 1 ಜೂನ್ 2022, 2:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಳದ ಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ (80) ಸಾವು ಸಂಶಯಾಸ್ಪದವಾಗಿದ್ದು, ಈ ಬಗ್ಗೆ ವಿಶೇಷ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಸ್ವಾಮೀಜಿಯವರ ಪೂರ್ವಾಶ್ರಮದ ಕೆಲ ಸಂಬಂಧಿಕರು ಒತ್ತಾಯಿಸಿದ್ದಾರೆ.

‘ಕೊಳದ ಮಠ ಮಹಾಸಂಸ್ಥಾನ’ ಲೆಟರ್‌ ಹೆಡ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿರುವ ಸಂಬಂಧಿಕರು, ‘ನೂರಾರು ಕೋಟಿ ಬೆಲೆಬಾಳುವ 11 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಠವಿದೆ. ಚಿನ್ನಾಭರಣವೂ ಅಪಾರ ಪ್ರಮಾಣವಿದೆ. ಇದನ್ನೆಲ್ಲ ಕಬಳಿಸುವ ಉದ್ದೇಶದಿಂದ ಲಾಭಕ್ಕಾಗಿ ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ಅನುಮಾನ ನಮಗಿದೆ’ ಎಂದೂ ದೂರಿನಲ್ಲಿ ಆಗ್ರಹಿಸಲಾಗಿದೆ.

‘ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿರುವ ಕಮಿಷನರ್, ಪರಿಶೀಲನೆಗಾಗಿ ಸಂಬಂಧ‍ಪಟ್ಟ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ತಪ್ಪಿಸಿ ಸಾಕ್ಷ್ಯ ನಾಶ: ‘ಏಪ್ರಿಲ್ 30ರಂದು ಮಠದ ಹಾಲ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಸ್ವಾಮೀಜಿ ನಿಧನರಾದ ಬಗ್ಗೆ ನಮಗೆ ಸುದ್ದಿ ಬಂದಿತ್ತು. ಆದರೆ, ಅವರು ನಿತ್ಯವೂ ಕೊಠಡಿಯೊಳಗೆ ಮಲಗುತ್ತಿದ್ದರು. ಯಾವತ್ತು ಹಾಲ್‌ನಲ್ಲಿ ಮಲಗುತ್ತಿರಲಿಲ್ಲ. ಜೊತೆಗೆ, ಬಾಗಿಲನ್ನು ಒಳಗಿನಿಂದ ಲಾಕ್‌ ಮಾಡಲಾಗಿತ್ತೆಂದು ಹೇಳಲಾಗುತ್ತಿದೆ. ಇದು ಅನುಮಾನ ಮೂಡಿಸಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಸ್ವಾಮೀಜಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹೇಳಲಾಗುತ್ತಿದೆ. ಸಾವಿನ ಬಗ್ಗೆ ಸಂಶಯವಿದ್ದರೂ ಮರಣೋತ್ತರ ಪರೀಕ್ಷೆ ಮಾಡಿಸಿಲ್ಲ. ಈ ಬಗ್ಗೆ ಒತ್ತಾಯಿಸಿದ್ದಕ್ಕೆ ಸಂಬಂಧಿಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಲಾಗಿದೆ. ಮರಣೋತ್ತರ ಪರೀಕ್ಷೆ ತಪ್ಪಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆ. ಸ್ವಾಮೀಜಿಗೆ ₹5 ಕೋಟಿ ವಂಚಿಸಿದ್ದ ವೈದ್ಯನಿಂದಲೇ ಸ್ವಾಮೀಜಿ ಸಾವಿನ ಬಗ್ಗೆ ಪ್ರಮಾಣೀಕರಿಸಲಾಗಿದೆ. ಜೊತೆಗೆ, ಮಠದ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿವೆ. ಸ್ವಾಮೀಜಿ ಅವರ ಆರೋಗ್ಯವೂ ಚೆನ್ನಾಗಿತ್ತು. ಅವರ ದಿಢೀರ್ ಸಾವು ನಂಬಲಾಗುತ್ತಿಲ್ಲ. ಕೆಲ ವರ್ಷಗಳಿಂದ ಸ್ವಾಮೀಜಿ ಸುತ್ತಲೂ ದುಷ್ಟಕೂಟ ಸಕ್ರಿಯವಾಗಿತ್ತು. ಸ್ವಾಮೀಜಿಗೆ ಕಿರುಕುಳ ನೀಡುತ್ತಿತ್ತು. ಈ ಬಗ್ಗೆ ಸ್ವಾಮೀಜಿಯೇ ನಮಗೆ ಕರೆ ಮಾಡಿ ತಿಳಿಸಿದ್ದರು' ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT