ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಕ್ಕೆ ‘ಆಹ್ವಾನ’ ನೀಡುವ ಬಂಗ್ಲೆ ಕ್ರಾಸ್‌!

ಕಿರಿದಾದ ತಿರುವಿನಲ್ಲಿ ವಾಹನ ಚಲಾಯಿಸುವುದೇ ಸವಾಲು: ಆಯತಪ್ಪಿದರೆ ಕಾಲುವೆಗೆ ಉರುಳುವ ಭೀತಿ
Last Updated 19 ಮೇ 2022, 18:18 IST
ಅಕ್ಷರ ಗಾತ್ರ

ಬೆಂಗಳೂರು: ಕಿರಿದಾದ ತಿರುವು. ಕಡಿದಾದ ರಸ್ತೆ. ಅದರ ಮೇಲೆಯೇ ಹರಿಯುವ ಕಾಲುವೆ ನೀರು. ಜಲಾವೃತವಾಗಿರುವ ಹಾದಿಯಲ್ಲೇ ಉಸಿರು ಬಿಗಿ ಹಿಡಿದು ಸಾಗುವ ವಾಹನ ಸವಾರರು....!

ಇದು ಕೊಮ್ಮಘಟ್ಟ ಗ್ರಾಮದ ಬಂಗ್ಲೆ ಕ್ರಾಸ್‌ನಲ್ಲಿ ಕಂಡುಬರುವ ದೃಶ್ಯ.

ಕೆಂಗೇರಿಯಿಂದ ರಾಮೋಹಳ್ಳಿ, ನೆಲಮಂಗಲ, ಮಾಗಡಿ, ತಾವರೆಕೆರೆ, ಸೂಲಿಕೆರೆ ಸೇರಿ ಹಲವು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಕಿರಿದಾಗಿರುವುದರಿಂದ ತಿರುವಿನಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳುವುದು ಸಾಮಾನ್ಯ ಎಂಬಂತಾಗಿದೆ.

ಲಘು ವಾಹನಗಳೇ ಸಾಗಲು ಆಗದಂತಹ ಈ ಹಾದಿಯಲ್ಲಿ ಬಸ್‌, ಲಾರಿ, ಕ್ಯಾಂಟರ್‌, ಟ್ರ್ಯಾಕ್ಟರ್‌ಗಳೂ ಸಂಚರಿಸುತ್ತವೆ! ಬಸ್‌ ಅಥವಾ ಲಾರಿ ಸಾಗುವಾಗ ವಿರುದ್ಧ ದಿಕ್ಕಿನಲ್ಲಿ ಬರುವವರು ರಸ್ತೆಯ ಅಂಚಿನಲ್ಲೇ ವಾಹನ ನಿಲ್ಲಿಸಿಕೊಂಡು ಕಾಯಬೇಕು. ಇದರಿಂದ ದಟ್ಟಣೆ ಸಮಸ್ಯೆಯೂ ಉಂಟಾಗುತ್ತದೆ.ರಸ್ತೆ ಬದಿಯಲ್ಲೇ ಕಾಲುವೆಯೊಂದು ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಮಣ್ಣಿನ ಕೊರೆತ ಉಂಟಾಗಿ ಗುಂಡಿಯೊಂದು ಬಿದ್ದಿದೆ.

‘ಕೆಲ ದಿನಗಳ ಹಿಂದೆ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ, ಕಾಲುವೆಯೊಳಗೆ ಕಾರು ಉರುಳಿ ಬಿದ್ದಿತ್ತು. ಕಾರಿನಲ್ಲಿ ಪುಟ್ಟ ಮಗುವೂ ಇತ್ತು. ಅದೃಷ್ಟವಶಾತ್‌ ಯಾರಿಗೂ ತೊಂದರೆಯಾಗಲಿಲ್ಲ. ಕಾರಿನಲ್ಲಿದ್ದವರನ್ನು ನಾವೇ ರಕ್ಷಣೆ ಮಾಡಿದ್ದೆವು. ಜೆಸಿಬಿ ನೆರವಿನಿಂದ ಕಾರನ್ನು ಮೇಲಕ್ಕೆ ಎತ್ತಲಾಗಿತ್ತು’ ಎಂದು ಹೊಸಕೆರೆಯ ನರಸಿಂಹ ತಿಳಿಸಿದರು.

‘ತಿಂಗಳಲ್ಲಿ ಇಲ್ಲಿ 10 ರಿಂದ 15 ಅಪಘಾತಗಳು ಸಾಮಾನ್ಯ. ಇದನ್ನು ನೋಡಿ ನೋಡಿ ನಮಗೂ ಸಾಕಾಗಿದೆ. ಸುಮಾರು 20 ವರ್ಷಗಳಿಂದ ಈ ಸಮಸ್ಯೆ ಇದೆ. ದೂರು ನೀಡಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದು ಮಾರಗೊಂಡನಹಳ್ಳಿಯ ಮಹೇಶ್‌ ದೂರಿದರು.

‘ಅಪಘಾತಗಳು ನಡೆದಾಗ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಹೋಗುತ್ತಾರೆ. ಕೆಲ ದಿನಗಳ ಹಿಂದೆ ನಡೆದ ಅಪಘಾತದಿಂದಾಗಿ ರಸ್ತೆ ಬದಿ ಹಾಕಲಾಗಿದ್ದ ಲೋಹದ ತಡೆಗೋಡೆ ಮುರಿದು ಬಿದ್ದಿದೆ. ವಾರ ಕಳೆದರೂ ಅದನ್ನು ಸರಿಪಡಿಸಿಲ್ಲ.ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕತ್ತಲಾದರೆ ಸಂಚಾರ ಕಷ್ಟ

‘ಕತ್ತಲಾದ ಮೇಲೆ ಈ ಮಾರ್ಗದಲ್ಲಿ ಸಾಗುವುದು ತುಂಬಾ ಕಷ್ಟ. ನೀರಿನಿಂದಾಗಿ ರಸ್ತೆಯೇ ಕಾಣುವುದಿಲ್ಲ. ಎಲ್ಲಿ ಗುಂಡಿ ಬಿದ್ದಿದೆ ಎಂಬುದೂ ಗೊತ್ತಾಗುವುದಿಲ್ಲ’ ಎಂದು ಹೊಸಕೆರೆಯ ಪವನ್‌ ಹೇಳಿದರು.

‘ಈ ರಸ್ತೆಯಲ್ಲಿ ನಿತ್ಯವೂ ಸಂಚರಿಸುತ್ತೇನೆ. ನೀರಿನ ಸೆಳೆತದಿಂದಾಗಿ ಎರಡು ದಿನಗಳ ಹಿಂದೆ ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದೆ. ಸ್ಥಳೀಯರ ಕಥೆಯೇ ಹೀಗಾದರೆ ಹೊಸದಾಗಿ ಈ ಮಾರ್ಗದಲ್ಲಿ ಸಂಚರಿಸುವವರ ಪಾಡೇನು’ ಎಂದು ಪ್ರಶ್ನಿಸಿದರು.

‘ಅಪಘಾತವಾದರೆ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗುತ್ತದೆ. ವಾಹನ ಸವಾರರು ಹತ್ತಾರು ಕಿ.ಮೀ ಸುತ್ತಿ ತಮ್ಮೂರಿಗೆ ಹೋಗಬೇಕಾಗುತ್ತದೆ’ ಎಂದೂ ತಿಳಿಸಿದರು.

ನೇರ ಮಾರ್ಗದಿಂದ ಸಮಸ್ಯೆಗೆ ಮುಕ್ತಿ

‘ಕೊಮ್ಮಘಟ್ಟದಿಂದ ಬರುವ ವಾಹನಗಳು ರಾಮಸಂದ್ರ ಬ್ಲಾಕ್‌ 3ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಂಪೇಗೌಡ ಬಡಾವಣೆಯ ಖಾಲಿ ನಿವೇಶನದ ಮೂಲಕ ನೇರವಾಗಿ ಸಾಗುವ ವ್ಯವಸ್ಥೆ ಮಾಡಬೇಕು. ಹಾಗಾದಾಗ ಮಾತ್ರ ತಿರುವಿನಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ’ ಎಂದು ಸ್ಥಳೀಯರು ತಿಳಿಸಿದರು.

‘ಅದು ಸಾಧ್ಯವಾಗದಿದ್ದರೆ ಈಗಿರುವ ರಸ್ತೆಯನ್ನೇ ವಿಸ್ತರಿಸಬೇಕು. ಕಾಲುವೆಯ ನೀರು ರಸ್ತೆ ಮೇಲೆ ಹಾದು ಹೋಗದಂತೆ ತಡೆಯಲು ಕ್ರಮವಹಿಸಬೇಕು’ ಎಂದೂ ಆಗ್ರಹಿಸಿದರು.

ಯಶವಂತಪುರ ಕ್ಷೇತ್ರ: ಜನಸ್ಪಂದನನಾಳೆ

ಯಶವಂತಪುರ ವಿಧಾನಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಶನಿವಾರ (ಇದೇ 21)ಕೆಂಗೇರಿ ಉಪನಗರದ ಬಂಡೆಮಠ ಮದುವೆ ಹಾಲ್‌ನಲ್ಲಿ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕ್ಷೇತ್ರದ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹಾಗೂ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ.

ಆಸಕ್ತರು ಬೆಳಿಗ್ಗೆ 10ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT