ಬುಧವಾರ, ಫೆಬ್ರವರಿ 26, 2020
19 °C
ಪೆಟ್ಟಿಗೆಯೊಂದರಲ್ಲಿ 30 ಕೆ.ಜಿ ತುಪ್ಪ ಉತ್ಪಾದನೆ * ದೇಶಿ ತುಡುವೆ ಜೇನು ಹುಳುಗಳಿಗೂ ಪ್ರಯೋಗ

ಚೀನಾ ಪೆಟ್ಟಿಗೆಯಲ್ಲಿ ಯೂರೋಪ್‌ ಜೇನು

ವರುಣ್ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯೂರೋಪಿನ ಜೇನು ಹುಳುಗಳನ್ನು ಚೀನಾದ ಪೆಟ್ಟಿಗೆಗಳಲ್ಲಿ ಸೆರೆ ಹಿಡಿದಿಡಲಾಗಿದ್ದು, ಪೆಟ್ಟಿಗೆಯೊಂದಲ್ಲಿ ಬರೋಬ್ಬರಿ 30 ಕೆ.ಜಿ. ಜೇನುತುಪ್ಪ ಉತ್ಪಾದನೆಯಾಗಲಿದೆ.

ಜೇನು ಕೃಷಿಯಲ್ಲಿ ಯಶಸ್ಸು ಸಾಧಿಸಿ, ಅಧಿಕ ಲಾಭಗಳಿಸಬೇಕೆಂಬ ಕನಸು ಹೊಂದಿರುವವರಿಗೆ ಈ ಬಾರಿಯ ‘ಕೃಷಿ ಮೇಳ’ ಹೊಸ ಭರವಸೆಯನ್ನು ಮೂಡಿಸಿದೆ. ಸದ್ಯ ಅನುಸರಿಸುತ್ತಿರುವ ಜೇನು ಕೃಷಿ ಪದ್ಧತಿಯಲ್ಲಿ ದೇಶಿಯ ಜೇನು ಹುಳುಗಳಿಂದ ಒಂದು ಪೆಟ್ಟಿಗೆಯಲ್ಲಿ 12 ಕೆ.ಜಿ.ವರೆಗೆ ಜೇನುತುಪ್ಪ ತೆಗೆಯಬಹುದಾಗಿದೆ.

ಹೀಗಾಗಿ ಆಸ್ಟ್ರೇಲಿಯಾ ಅಭಿವೃದ್ಧಿಪಡಿಸಿರುವ ‘ಫ್ಲೋ ಹೈವ್‌’ ಎಂಬ ಎರಡು ಜೇನು ಪೆಟ್ಟಿಗೆಯನ್ನು ಕೃಷಿ ವಿಶ್ವವಿದ್ಯಾಲಯ ಚೀನಾದಿಂದ ಆಮದು ಮಾಡಿಕೊಂಡಿದೆ. ಅದೇ ರೀತಿ, ಅಧಿಕ ಇಳುವರಿ ನೀಡುವ ಯೂರೋಪಿನ ಜೇನು ಹುಳುಗಳನ್ನು (ಏಪಿಸ್‌ ಮೆಲ್ಲಪಿಫೆರಾ) ತಂದು, ಪೆಟ್ಟಿಗೆಯಲ್ಲಿ ಹಾಕಲಾಗಿದೆ. 

ಜೇನು ಹುಳುಗಳು ಎರಿಗಳನ್ನು (ಜೇನು ಹುಟ್ಟು) ನಿರ್ಮಿಸಿಕೊಂಡ ಬಳಿಕ ಹೂವುಗಳ ಮಕರಂದವನ್ನು ಸಂಗ್ರಹಿಸಿ, ಜೇನುತುಪ್ಪ ಮಾಡಲು ಆರಂಭಿಸುತ್ತವೆ. ಆದರೆ, ‘ಫ್ಲೋ ಹೈವ್‌’ ಪೆಟ್ಟಿಗೆಯಲ್ಲಿ ಪ್ಲಾಸ್ಟಿಕ್‌ ಮಾದರಿಯ ಏಳು ಎರಿಗಳಿವೆ.

ಪೆಟ್ಟಿಗೆಯೊಳಗಿನ ಪ್ರತಿಯೊಂದು ಎರಿಗಳಿಗೂ ನಳಿಕೆಗಳನ್ನು ಅಳವಡಿಸಲಾಗಿದೆ. ನಳ ಹಾಗೂ ತಿರುಗಿಸುವ ಸಾಧನ ಕೂಡಾ ಇದೆ.
ಇದರಿಂದಾಗಿ ಎರಿಗಳಲ್ಲಿ ಜೇನುತುಪ್ಪ ತುಂಬಿದ ಬಳಿಕ ಕೈಯಿಂದ ತುಪ್ಪವನ್ನು ತೆಗಿಯಬೇಕಿಲ್ಲ. ಬದಲಾಗಿ ನಳದ ಮೂಲಕವೇ ಅಷ್ಟೂ ಎರಿಗಳ ತುಪ್ಪವನ್ನು ಸುಲಭವಾಗಿ ತೆಗೆಯಬಹುದಾಗಿದೆ. 

ತುಡುವೆ ಜೇನಿಗೆ ಪ್ರಯೋಗ: ಕೃಷಿ ವಿಶ್ವವಿದ್ಯಾಲಯ ದೇಶಿಯ ಜೇನು ತಳಿಗಳಿಗೆ ಸಹ ಇದೇ ಮಾದರಿಯನ್ನು ಅಳವಡಿಸ
ಬಹುದಾಗಿದೆ. ತುಡುವೆ ಜೇನು, ಏಪಿಸ್‌ ಮೆಲ್ಲಪಿಫೆರಾ ಜೇನು ಹಾಗೂ ನಸುರು ಜೇನುಹುಳಗಳು ಸಾಕಲು ಯೋಗ್ಯವಾದ ವುಗಳಾಗಿವೆ.  ದೇಶಿಯ ತುಡುವೆ ಜೇನನ್ನು ‘ಫ್ಲೋ ಹೈವ್‌’ ಪೆಟ್ಟಿಗೆಯಲ್ಲಿ ಸಾಕಣೆ ನಡೆಸುವ ಪ್ರಯೋಗವನ್ನು ನಡೆಸಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಜೇನು ಕೃಷಿ ವಿಭಾಗದ ವಿಜ್ಞಾನಿ ಡಾ. ವಿಜಯ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪೆಟ್ಟಿಗೆಗೆ ₹50 ಸಾವಿರ ಇದ್ದು, ಪ್ರತ್ಯೇಕ ಲಾಕ್‌ ವ್ಯವಸ್ಥೆ ಕೂಡಾ ಇದೆ. ಜೇನಿನ ಎರಿಗಳನ್ನು ಹಿಂಡದೆಯೇ ತುಪ್ಪವನ್ನು ತೆಗೆಯಲಾಗುತ್ತದೆ.

ಇದರಿಂದಾಗಿ ಜೇನಿನ ಹುಳು, ಮರಿಗಳಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಜೇನುತುಪ್ಪವನ್ನು ಸೋಸುವ ವ್ಯವಸ್ಥೆ ಇದೆ’ ಎಂದು ವಿಭಾಗದ ಸಿಬ್ಬಂದಿ ಚಿಕ್ಕೇಗೌಡ ತಿಳಿಸಿದರು. 

 ‘ಲಾಭದಾಯಕ ಮುಜಂಟಿ ಜೇನು’‘ರಾಜ್ಯ ಸರ್ಕಾರ ತುಡುವೆ ಜೇನಿಗೆ ಮಾತ್ರ ಸಹಾಯಧನ ನೀಡುತ್ತಿದೆ. ಈ ಜೇನಿನಿಂದ ವರ್ಷಕ್ಕೆ ಒಂದು ಪೆಟ್ಟಿಗೆಯಲ್ಲಿ 11 ಕೆ.ಜಿ. ಜೇನುತುಪ್ಪ ದೊರೆಯಲಿದೆ. ಪರಾಗಸ್ಪರ್ಶ ಕ್ರಿಯೆಯು ಜೇನು ನೊಣಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ರೈತರು ಒಂದು ಎಕರೆಗೆ 2ರಿಂದ 3 ಜೇನು ಕುಟುಂಬಗಳನ್ನು ಸಾಕಿದರೆ ಬೆಳೆಗಳು ಉತ್ತಮ ಫಲಸು ಬರಲಿವೆ’ ಎಂದು ಡಾ. ವಿಜಯ್‌ ಕುಮಾರ್ ತಿಳಿಸಿದರು.

‘ಜೇನುತುಪ್ಪದಲ್ಲಿ ಅನೇಕ ವಿಧಗಳಿವೆ. ನೇರಳೆ ಜೇನುತುಪ್ಪ, ಇಚ್ಚಿ ಜೇನುತುಪ್ಪ, ಹೆಜ್ಜೆನು, ಕಾಡು ಮುಜಂಟಿ, ತುಳಸಿ, ಮಾವು ಎಂದು ಜೇನುತುಪ್ಪವನ್ನು ವಿಂಗಡಿಸಲಾಗುತ್ತದೆ. ಜೇನು ಗೂಡು ಕಟ್ಟಿದ ಪ್ರದೇಶದಲ್ಲಿನ ಬೆಳೆ ಹಾಗೂ ತುಪ್ಪವನ್ನು ಪರಿಶೀಲಿಸಿ, ಯಾವ ಜೇನುತುಪ್ಪ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಅದೇ ರೀತಿ, ಜೇನುತುಪ್ಪದ ಪರಾಗ ಹಾಗೂ ಹೂವಿನ ಪರಾಗ ಹೊಂದಾಣಿಕೆಯಿಂದಲೂ ಜೇನುತುಪ್ಪವನ್ನು ಪರಿಶೀಲಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಏಕ ಪುಷ್ಪದಿಂದ ದೊರೆಯುವ ಜೇನುತುಪ್ಪ (ಮೊನೋ ಪ್ಲೋರಲ್) ಹಾಗೂ ಮುಜಂಟಿ ಜೇನುತುಪ್ಪ ದುಬಾರಿ. ಆಯುರ್ವೇದದಲ್ಲಿ ಮುಜಂಟಿ ಜೇನುತುಪ್ಪವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹುಳು ಸಮೇತ ಜೇನುಪೆಟ್ಟಿಗೆಯ ಒಂದು ಕಿಟ್‌ಗೆ ₹4,500 ಇದ್ದು, ರೈತರಿಗೆ ಶೇ 75 ರಷ್ಟು ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ’ ಎಂದು ಹೇಳಿದರು.

ಚೀನಾದ ‘ಫ್ಲೋ ಹೈವ್‌’ ಜೇನುಸಾಕಣೆ ಪೆಟ್ಟಿಗೆ

ಅಂಕಿ–ಅಂಶಗಳು

05: ಜೇನಿನಲ್ಲಿರುವ ಪ್ರಭೇದಗಳು

₹1 ಸಾವಿರ: ಏಕ ಪುಷ್ಪದಿಂದ ದೊರೆಯುವ ಜೇನುತುಪ್ಪದ ದರ (ಕೆ.ಜಿ.ಗೆ) 

₹3 ಸಾವಿರ: ಮುಜಂಟಿ ಜೇನುತುಪ್ಪದ ದರ (ಕೆ.ಜಿ.ಗೆ) 

₹2 ಸಾವಿರ: ಒಂದು ಜೇನು ಪೆಟ್ಟಿಗೆಯ ದರ

₹500: ಜೇನು ಪೆಟ್ಟಿಗೆಯ ಸ್ಟ್ಯಾಂಡ್‌ ದರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)